ಶಿವಮೊಗ್ಗ: ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಾವ ಸರಿಯಾದ ಮಾಹಿತಿ ಇಲ್ಲದೇ, ಕೋಮು ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿದ್ದಾರೆ. ನಂತರ ಪೊಲೀಸರು ಘಟನೆಯನ್ನು ಸ್ಪಷ್ಟಪಡಿಸಿದ ಮೇಲೆ ಮಾಹಿತಿ ಕೊರತೆ ಇತ್ತು. ತಪ್ಪಾಗಿದೆ ಎಂದು ಹೇಳಿದ್ದಾರೆ. ಒಬ್ಬ ಗೃಹಮಂತ್ರಿಗೆ ಯಾವ ವಿಚಾರ ಹೇಳಬೇಕು ಎಂದು ಗೊತ್ತಿಲ್ಲವೇ? ಇದು ಗೃಹ ಸಚಿವರ ಆಷಾಢಭೂತಿತನಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆರಗ ಜ್ಞಾನೇಂದ್ರ ಮತ್ತು ಸಿ.ಟಿ. ರವಿ ಅವರು ಅಪರಾಧಿಕ ಒಳ ಸಂಚು ನಡೆಸಿ ಧಾರ್ಮಿಕ ಭಾವನೆಗಳಿಗೆ ಕೊಳ್ಳಿ ಇಟ್ಟಿದ್ದಾರೆ. ಸಾಮಾಜಿಕ ಶಾಂತಿ ಕದಡಲು ಪ್ರೇರಣೆ ನೀಡಿದ್ದಾರೆ.

ಇದು ಕೂಡ ದೇಶದ್ರೋಹದ ಕೃತ್ಯವಾಗಿದೆ. ಮತ್ತು ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.ಐಪಿಸಿ ಸೆಕ್ಷನ್ 120, 120 ಬಿ, 124 ಎ, 153 ರ ಅಡಿಯಲ್ಲಿ ಈ ಇಬ್ಬರ ವಿರುದ್ಧ ಕೇಸ್ ದಾಖಲಿಸಿಕೊಳ್ಳಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿ ಕೋಮುಗಲಭೆಗಳಿಗೆ ಉತ್ತೇಜನದ ಪ್ರಚೋದನೆ ನೀಡಿದ ಆರೋಪದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ವೈ.ಹೆಚ್. ನಾಗರಾಜ್, ಚಂದ್ರಭೂಪಾಲ್, ಯಮುನಾ ರಂಗೇಗೌಡ, ಅನಿತಾ ಕುಮಾರಿ, ಮೆಹಖ್ ಶರೀಫ್, ವಿಶ್ವನಾಥ ಕಾಶಿ, ಸ್ಟೆಲ್ಲಾ ಮಾರ್ಟಿನ್,ಎನ್.ಡಿ. ಪ್ರವೀಣ್ ಕುಮಾರ್ ಮೊದಲಾದವರಿದ್ದರು. ಆ

ವರದಿ ಮಂಜುನಾಥ್ ಶೆಟ್ಟಿ…