ಶಿವಮೊಗ್ಗ: ದಿನನಿತ್ಯ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ಹಠಾವೋ ದೇಶ್ ಬಚಾವೋ ಎಂಬ ಘೋಷಣೆಯೊಂದಿಗೆ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಇಂದು ಮಹಾವೀರ ವೃತ್ತದಲ್ಲಿ ಸೌದೆ ಒಲೆ ಹಚ್ಚಿ , ಪ್ರಧಾನಿ ಮೋದಿಯ ,ಅಣಕು ಪ್ರತಿಕೃತಿಗೆ ಮಸಿಬಳಿಯುವ ಮುಖಾಂತರ ಪ್ರತಿಭಟಿಸಲಾಯಿತು.
ದಿನನಿತ್ಯ ಅಡುಗೆ ಅನಿಲ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡುತ್ತಿರುವ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ, ಮಾಡಿ ದೇಶದ ಜನತೆಗೆ ದಿನನಿತ್ಯ ಬರೆ ಹಾಕುತ್ತಿರುವ ಜನವಿರೋಧಿ ಬಿಜೆಪಿ ಸರ್ಕಾರದ ನೀತಿಯನ್ನು ಪ್ರತಿಭಟನಾಕಾರರು ಖಂಡಿಸಿದರು. ದೇಶಕ್ಕೆ ಅಚ್ಚೇ ದಿನ್ ತರುತ್ತೇನೆಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಡುಗೆ ಅನಿಲದ ಪೆಟ್ರೋಲ್, ಡೀಸೆಲ್ , ರಸಗೊಬ್ಬರ , ಔಷಧಿ ಹಾಗೂ ಕರ್ನಾಟಕದ ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್ ದರವನ್ನು ದಿನನಿತ್ಯ ಏರಿಕೆ ಮಾಡುತ್ತಾ ಈಗಾಗಲೇ ಕೋವಿಡ್ ಸಂಕಷ್ಟದಲ್ಲಿರುವ ಶ್ರೀಸಾಮಾನ್ಯನ ತೆರಿಗೆ ಹೊರೆಯನ್ನು ಹೇರುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಹಲವಾರು ರೈತ-ಕಾರ್ಮಿಕ – ಯುವಕ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಷ್ಠಾನಗೊಳಿಸಿ ದೇಶದ ಹಲವಾರು ಸರ್ಕಾರಿ ವಲಯಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾದ ಈ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹಲವು ಬಾರಿ ಎಚ್ಚರಿಕೆ ಸಂದೇಶಗಳನ್ನು ನೀಡಿದ್ದು, ಕೂಡಲೇ ರಾಷ್ಟ್ರಪತಿಗಳು ಈ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್. ಪಿ. ಗಿರೀಶ್, ಎಂ. ಪ್ರವೀಣ್ ಕುಮಾರ್, ಪ್ರದೀಪ್, ಎಸ್.ಪಿ. ದಿನೇಶ್, ರವಿಕುಮಾರ್, ಯಮುನಾ ರಂಗೇಗೌಡ, ಹೆಚ್.ಸಿ. ಯೋಗೀಶ್, ಮೆಹಖ್ ಷರೀಫ್, ಅನಿತಾ ಕುಮಾರಿ, ಬಿ. ಲೋಕೇಶ್, ಈ.ಟಿ. ನಿತಿನ್, ವಿನಯ್, ಎಸ್. ಕುಮರೇಶ್, ವಿನೋದ್ ಕುಮಾರ್, ಅಫ್ತಾಬ್ ಅಹ್ಮದ್, ರಾಘವೇಂದ್ರ, ಕರುಣಾಕರ, ಸ್ಟೆಲ್ಲಾ ಮಾರ್ಟಿನ್, ಚಂದ್ರಕಲಾ ಮೊದಲಾದವರಿದ್ದರು.