ತೀರ್ಥಹಳ್ಳಿ ತಾಲೂಕಿನ ಮುಳಬಾಗಿಲು ಹಾಗೂ ಇತರ 1616 ಜನವಸತಿಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸುಮಾರು 274 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಕಾಮಗಾರಿ ಚಾಲನೆಗೆ ಹಸಿರು ನಿಶಾನೆ ದೊರಕಿದೆ.

ಕೇಂದ್ರ ಸರಕಾರದ ಪ್ರಯೋಜನತ್ವ ಹೊಂದಿರುವ ಈ ಮಹತ್ವಾಕಾಂಕ್ಷೆ ಯೋಜನೆಯನ್ನು, ಜಲಜೀವನ್ ಮಿಷನ್ ಅಡಿಯಲ್ಲಿ, ಕೇವಲ ಒಂದೂ ವರೆ ವರ್ಷಗಳ ಕಾಲಮಿತಿ ಯೊಳಗೆ, ಅನುಷ್ಠಾನಗೊಳಿಸಲಾಗುವದು.
ಈ ಕುರಿತು ಪ್ರತಿಕ್ರಿಯಿಸಿದ, ಕರ್ನಾಟಕ ಸರಕಾರದ ಗೃಹ ಸಚಿವರೂ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕರೂ ಆದ ಶ್ರೀ ಆರಗ ಜ್ಞಾನೇಂದ್ರ ರವರು ” ಸದರಿ ಯೋಜನೆಗೆ ತಗಲುವ ವೆಚ್ಚವನ್ನು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ಭರಿಸಲಿದ್ದು
ಇದೀಗ ರಾಜ್ಯ ಸರಕಾರ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದರಿಂದ, ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲು ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು” ಎಂದಿದ್ದಾರೆ.

ಗ್ರಾಮೀಣ ಪ್ರದೇಶದ ಬಹುಪಾಲು ಪ್ರದೇಶಗಳಲ್ಲಿ, ಜನರು, ಕುಡಿಯುವ ನೀರನ್ನು ಅಂತರ್ಜಲ ಮೂಲಗಳಿಂದ ಪಡೆಯುತ್ತಿದ್ದಾರೆ.
ಆದರೆ, ಇತ್ತೀಚಿನ ದಿನಗಳಲ್ಲಿ,ಅಂತರ್ಜಲ ನೀರಿನ ಮೂಲಗಳು ಬತ್ತಿ ಹೋಗುತ್ತಿದ್ದು, ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗುತ್ತದೆ.

ಈ ಹಿನ್ನೆಲೆಯಲ್ಲಿ, ಸುಸ್ಥಿರ ಹಾಗೂ ಸುರಕ್ಷಿತ ಮೇಲ್ಮೈಜಲ ನೀರಿನ ಮೂಲದಿಂದ ಕುಡಿಯುವ ನೀರನ್ನು ಒದಗಿಸಲು, ತಾಲೂಕಿನ ಮಿನಗುಂದ ಗ್ರಾಮದ ಬಳಿ, ತುಂಗಾ ನದಿಯಿಂದ ನೀರನ್ನು ಎತ್ತಿ, ಯೋಜನೆಯನ್ನು ಕಾರ್ಯಗತೊಳಿಸಲು ನಿರ್ಧರಿಸಲಾಗಿದೆ.

ಗುತ್ತಿಗೆದಾರರು, ಕಾಮಗಾರಿಯನ್ನು DBOT ಮಾದರಿಯಲ್ಲಿ, 18 ತಿಂಗಳುಗಳ ಅವಧಿಯಲ್ಲಿ ಕಾರ್ಯಗತ ಗೊಳಿಸಿ, ನಂತರ ಐದು ವರ್ಷಗಳ ಕಾಲ, ಕಾರ್ಯಾಚರಣೆ ಹಾಗೂ ನಿರ್ವಹಣೆ ಜವಾಬ್ದಾರಿ ಯನ್ನು, ನಡೆಸಲಿದ್ದಾರೆ, ಎಂದು ಶ್ರೀ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…