ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿಯಾಗಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಗ್ರಹಿಸಿದರು.

ಅವರು ಇಂದು ಶಿವಪ್ಪ ನಾಯಕ ಪ್ರತಿಮೆ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಮೊದಲನೇ ಆರೋಪಿಯಾಗಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 306 ಹಾಗೂ ಸೆಕ್ಷನ್ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ಕಾನೂನಾತ್ಮಕವಾಗಿ ಇವರ ಬಂಧನ ಆಗಲೇಬೇಕು ಎಂದು ಒತ್ತಾಯಿಸಿದರು.

ಈಶ್ವರಪ್ಪ ಅವರು ಮಿತಿಮೀರಿ ಮಾತನಾಡುತ್ತಿದ್ದಾರೆ. ಧರ್ಮಗಳ ನಡುವೆ ವಿಷಬೀಜ ಬಿತ್ತಿದ್ದಾರೆ. ಅವರ ಪಾಪದ ಕೊಡ ತುಂಬಿ ತುಳುಕುತ್ತಿದೆ. ನೆಮ್ಮದಿಯಾಗಿದ್ದ ಶಿವಮೊಗ್ಗದಲ್ಲಿ ಅಶಾಂತಿಯನ್ನ ಮೂಡಿಸಿದವರು ಅವರು. ಅವರ ಹಿಂದೂ ಧರ್ಮದ ಸಿದ್ಧಾಂತಗಳೇ ಜನವಿರೋಧಿಯಾಗಿದ್ದವು. ಅವರಿಗೆ ಈಗ ಕಾಲವೇ ತಕ್ಕ ಉತ್ತರ ಕೊಡುತ್ತಿದೆ. ಅವರು ಕೇವಲ ರಾಜೀನಾಮೆ ಕೊಟ್ಟರೆ ಸಾಲದು ಅವರ ಬಂಧನವಾಗಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು. ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮತ್ತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯ ಸರ್ಕಾರದ ವಿರುದ್ಧ ಶೇ. 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಪಿ. ಶೇಷಾದ್ರಿ, ಎನ್. ರಮೇಶ್, ಬಲದೇವ್ ಕೃಷ್ಣ, ಸೌಗಂಧಿಕಾ, ಚಂದ್ರಭೂಪಾಲ್, ರಾಮೇಗೌಡ, ಯಮುನಾ ರಂಗೇಗೌಡ, ಚಂದ್ರಶೇಖರಪ್ಪ, ತಬಸ್ಸುಮ್, ಸುಮಾ, ಸಿ.ಜಿ. ಮಧುಸೂದನ್, ಕೆ. ಚೇತನ್, ವಿಜಯಕುಮಾರ್, ಬಾಬು, ಜಿ.ಡಿ. ಮಂಜುನಾಥ್, ಎಲ್. ಸತ್ಯನಾರಾಯಣ್, ಧರ್ಮರಾಜ್, ವಿಶ್ವನಾಥ್ ಕಾಶಿ, ನಾಗರಾಜ್, ಬಿ.ಎ. ರಮೇಶ್ ಹೆಗ್ಡೆ ಸೇರಿದಂತೆ ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…