ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಬ್ಯಾಂಕಿನ ಇತಿಹಾಸದಲ್ಲಿಯೇ ಅತಿ ಹೆಚ್ಚು ಲಾಭ ಗಳಿಸಿದ್ದು, 2021-22ನೇ ಸಾಲಿಗೆ 23.26 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಇನ್ನೇನು ಮುಚ್ಚಿ ಹೋಯಿತು ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಬ್ಯಾಂಕ್ ಫಿನಿಕ್ಸ್ ಹಕ್ಕಿಯಂತೆ ಮತ್ತೆ ಬೆಳೆದು ನಿಂತಿದೆ. ಠೇವಣಿಯೂ ಸೇರಿದಂತೆ ಎಲ್ಲ ಕೋನಗಳಲ್ಲಿಯೂ ಬ್ಯಾಂಕ್ ಸಾಧನೆ ಮಾಡಿದ್ದು, 23.26 ಕೋಟಿ ಲಾಭ ಗಳಿಸಿದೆ. ಇದು ಬ್ಯಾಂಕ್ನ ಇತಿಹಾಸದಲ್ಲಿಯೇ ದಾಖಲೆಯಾಗಿದೆ ಎಂದರು.ಠೇವಣಿ ಮೊತ್ತ ಕೂಡ ಹೆಚ್ಚಾಗಿದ್ದು, 2022ರ ಮಾರ್ಚ್ ಅಂತ್ಯಕ್ಕೆ 1244.36 ಕೋಟಿ ರೂ.ಗಳ ಠೇವಣಿ ಸಂಗ್ರಹವಾಗಿದೆ. ಇದು ಕೂಡ ದಾಖಲೆಯಾಗಿದೆ. ಎನ್.ಪಿ.ಎ. ಪ್ರಮಾಣ ಕಡಿಮೆಯಾಗಿರುವುದು ಕೂಡ ಸ್ವಾಗತದ ವಿಷಯ. ಈ ಹಿಂದೆ ಎನ್.ಪಿ.ಎ. ಪ್ರಮಾಣ ಶೇ.5ರಷ್ಟು ನಿಗಧಿಯಿದೆ. ಅದು ಈಗ 4.21ಕ್ಕೆ ಇಳಿದಿದೆ. ಬ್ಯಾಂಕ್ 2517.36 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ. 89945 ರೈತರಿಗೆ 976.33 ಕೋಟಿ ಬೆಳೆ ಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಕೂಡ ಶೇ. 99.32ರಷ್ಟಿದೆ. 387 ರೈತರಿಗೆ 40.43 ಕೋಟಿ ಮಧ್ಯಮಾವಧಿ ಸಾಲ ನೀಡಲಾಗಿದೆ ಎಂದರು.
ಬ್ಯಾಂಕಿನಿಂದ 2823 ಸ್ವಸಹಾಯ ಗುಂಪುಗಳಿಗೆ 84.65 ಕೋಟಿ ರೂ. ಸಾಲ ನೀಡಲಾಗಿದೆ. ಸರ್ಕಾರದ ಕಾಯಕ ಯೋಜನೆಯಡಿ 10 ಲಕ್ಷಗಳ ವರೆಗೆ ಸಾಲ ನೀಡುತ್ತಿದ್ದು, 44 ಮಹಿಳಾ ಗುಂಪುಗಳಿಗೆ 3.21 ಕೋಟಿ ರೂ. ಸಾಲ ನೀಡಲಾಗಿದೆ. 2019-20ರ ಸಾಲಿಗೆ ನಬಾರ್ಡ್ ಪರಿವೀಕ್ಷಣೆ ವರದಿಯಲ್ಲಿ ಬ್ಯಾಂಕಿಗೆ ಎ ದರ್ಜೆ ಪ್ರಮಾಣ ಪತ್ರ ಕೂಡ ನೀಡಿರುವುದು ಬ್ಯಾಂಕಿನ ಹೆಮ್ಮೆಯಾಗಿದೆ ಎಂದರು.ಬ್ಯಾಂಕ್ ಕೃಷಿಯೇತರ ಸಾಲವಾಗಿ 286.12 ಕೋಟಿ ಸಾಲ ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಯಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ 1313 ಸದಸ್ಯರಿಗೆ 204.26 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹುಸೇವಾ ಕೇಂದ್ರಗಳನ್ನಾಗಿ ಮಾರ್ಪಡಿಸಿ 38 ಸಹಕಾರ ಸಂಘಗಳಿಗೆ 21.45 ಕೋಟಿ ರೂ.ಗಳನ್ನು ಮೂಲಭೂತ ಸೌಕರ್ಯ ನಿಧಿಗೆ ನೀಡುವಂತೆ ನಬಾರ್ಡ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಹೀಗೆ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿದ್ದು, ಮೈಕ್ರೋ ಎಟಿಎಂ ಮಿಷನ್ ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್, ಬಿಬಿಪಿಎಸ್ ಠೇವಣಿ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಏಕರೂಪ ತಂತ್ರಾಂಶದ ಯೋಜನೆ ಅಡಿಯಲ್ಲಿ ಗಣಕೀಕರಣಗೊಳಿಸಲಾಗುವುದು, ಮುಂದಿನ ವರ್ಷ 30 ಕೋಟಿ ನಿವ್ವಳ ಲಾಭ ಗಳಿಸುವ ಗುರಿಯಿದೆ ಎಂದರು.
ಬ್ಯಾಂಕ್ ಗಳ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಡಿಸಿಸಿ ಬ್ಯಾಂಕ್ ಅನ್ನು ಅಫೆಕ್ಸ್ ಬ್ಯಾಂಕ್ ನೊಂದಿಗೆ ಯಾವುದೇ ಕಾರಣಕ್ಕೂ ವಿಲೀನಗೊಳಿಸಬಾರದು. ರಾಜ್ಯದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿವೆ. ಈ ಎಲ್ಲಾ ಸಹಕಾರ ಸಂಘಗಳ ಮೇಲ್ವಿಚಾರಣೆಯನ್ನು ಡಿಸಿಸಿ ಬ್ಯಾಂಕ್ ನೋಡಿಕೊಳ್ಳುತ್ತದೆ. ಆದರೆ, ಅಫೆಕ್ಸ್ ಬ್ಯಾಂಕ್ ಗೆ ವಿಲೀನ ಮಾಡುವುದರಿಂದ ತೊಂದರೆಯಾಗುತ್ತದೆ. ಅಫೆಕ್ಸ್ ಬ್ಯಾಂಕ್ ಇರುವುದು ಬೆಂಗಳೂರಿನಲ್ಲಿ ವಿವಿಧ ವಿಷಯಗಳಿಗಾಗಿ ಬೀದರ್ ನಂತಹ ಜಿಲ್ಲೆಯಿಂದ ಸುಮಾರು 800 ಕಿ.ಮೀ. ದೂರದ ಬೆಂಗಳೂರಿಗೆ ಬರುವುದು ಕೂಡ ಕಷ್ಟವಾಗುತ್ತದೆ. ಆಡಳಿತಾತ್ಮಕ ದೃಷ್ಟಿಯಿಂದಲೂ ಕೂಡ ಇದು ಅವೈಜ್ಞಾನಿಕವಾಗಿದೆ ಎಂದರು.
ಸಮಾರಂಭ…
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಂದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ವಿತರಣೆ ಹಾಗೂ ವಿವಿಧ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮವು ಏ.18ರಂದು ಬೆಳಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಉಸ್ತುವಾರಿ ಸಚಿವ ಡಾ. ಕೆ.ಸಿ. ನಾರಾಯಣಗೌಡರು ಸಹಕಾರಿ ಧ್ವಜಾರೋಹಣ ನೆರವೇರಿಸುವರು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಹೊಸ ಸದಸ್ಯರಿಗೆ ಸಾಲದ ಚೆಕ್ ನೀಡುವರು. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮೈಕ್ರೋ ಎಟಿಎಂ ವಿತರಿಸುವರು. ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಾಲದ ಚೆಕ್ ವಿತರಿಸುವರು. ವಿಶೇಷ ಆಹ್ವಾನಿತರಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗಮಿಸುವರು. ಸಂಸದ ಬಿ.ವೈ. ರಾಘವೇಂದ್ರ ಗೋದಾಮು ಸಾಲದ ಚೆಕ್ ವಿತರಿಸುವರು ಎಂದರು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಬಿ.ಕೆ. ಸಂಗಮೇಶ್, ಕೆ.ಬಿ. ಅಶೋಕ್ ನಾಯ್ಕ, ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಭಾರತೀ ಶೆಟ್ಟಿ, ಎಸ್.ಎಲ್. ಭೋಜೇಗೌಡ, ಡಿ.ಎಸ್. ಅರುಣ್ ಹಾಗೂ ಸಹಕಾರ ಸಂಘಗಳ ನಿಬಂಧಕ ಜಿಯಾವುಲ್ಲಾ, ನಬಾರ್ಡ್ ನ ಪ್ರಧಾನ ವ್ಯವಸ್ಥಾಪಕ ನೀರಜ್ ಕುಮಾರ್ ವರ್ಮಾ ಸೇರಿದಂತೆ ಅಧಿಕಾರಿಗಳು, ಸಹಕಾರಿ ಧುರೀಣರು ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ, ನಿರ್ದೇಶಕರುಗಳಾದ ಕೆ.ಪಿ. ದುಗ್ಗಪ್ಪಗೌಡ, ಎಂ.ಎಂ. ಪರಮೇಶ್, ಜೆ.ಪಿ. ಯೋಗೀಶ್, ಹೆಚ್.ಕೆ.ವೆಂಕಟೇಶ್, ಎಸ್.ಪಿ. ದಿನೇಶ್, ಜಿ.ಎನ್. ಸುಧೀರ್, ಬಿ.ಕೆ. ಗುರುರಾಜ್, ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಡೋಂಗ್ರೆ ಉಪಸ್ಥಿತರಿದ್ದರು.