ಶಿವಮೊಗ್ಗ: ಅನ್ನದಾತನಿಗೆ ಸಹಕಾರಿ ಬ್ಯಾಂಕ್ ಗಳು ನೆರವಾಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಅವರು ಇಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ವಿತರಣೆ ಹಾಗೂ ವಿವಿಧ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಬ್ಯಾಂಕ್ ಗಳು ರೈತನಿಗೆ ನೆರವಾಗುತ್ತಲಿವೆ. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದು ನಮ್ಮ ಅಧಿಕಾರವಧಿಯಲ್ಲಿ ನಡೆದಿದೆ. ಆ ಮೂಲಕ ಅನ್ನದಾತನ ನೆರವಿಗೆ ಸಹಕಾರ ಬ್ಯಾಂಕ್ ಗಳು ಪ್ರಥಮ ಆದ್ಯತೆ ನೀಡುತ್ತಿವೆ. ಇದರ ಜೊತೆಗೆ ಮಹಿಳೆಯರು ಸ್ವಾವಲಂಬನೆ ಮತ್ತು ಸ್ವಾಭಿಮಾನದಿಂದ ಬದುಕಲು ನೆರವು ನೀಡುತ್ತಿವೆ ಎಂದರು.ಈ ಹಿಂದೆ ಅಧ್ಯಕ್ಷನಾಗಿದ್ದ ಮಹಾನುಭಾವರೊಬ್ಬರು ಡಿಸಿಸಿ ಬ್ಯಾಂಕ್ ಕೊಳ್ಳೆ ಹೊಡೆದು ಸುಮಾರು 62 ಕೋಟಿ ರೂ.ಗೂ ಹೆಚ್ಚು ನಷ್ಟವನ್ನುಂಟು ಮಾಡಿದ್ದರು. ನಷ್ಟದಲ್ಲಿದ್ದ ಬ್ಯಾಂಕ್ ಅನ್ನು ಈಗಿನ ಅಧ್ಯಕ್ಷರು ಲಾಭದತ್ತ ತೆಗೆದುಕೊಂಡು ಹೋಗಿರುವುದು ಸಾಧನೆಯಾಗಿದೆ ಎಂದು ಹಿಂದಿನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರಿಗೆ ಟಾಂಗ್ ಕೊಟ್ಟರು.

ಪ್ರಾಮಾಣಿಕ ಪಾರದರ್ಶಕತೆ ಇದ್ದರೆ ಸಹಕಾರ ಬ್ಯಾಂಕ್ ಗಳು ಕೂಡ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಹಿಮ್ಮೆಟ್ಟುತ್ತವೆ ಎಂಬುದಕ್ಕೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಉದಾಹರಣೆಯಾಗಿದೆ. ಈ ನಷ್ಟದಲ್ಲಿದ್ದ ಬ್ಯಾಂಕ್ ಅನ್ನು ಚನ್ನವೀರಪ್ಪ ನೇತೃತ್ವದ ತಂಡ ಲಾಭದತ್ತ ತೆಗೆದುಕೊಂಡು ಹೋಗಿದೆ. ಇದು ಸ್ವಾಗತಾರ್ಹ ವಿಷಯವಾಗಿದೆ. ಸಹಕಾರಿ ಕ್ಷೇತ್ರ ಎಲ್ಲಾ ರಂಗಗಳಲ್ಲಿಯೂ ದಾಪುಗಾಲು ಹಾಕುತ್ತಿದೆ ಎಂದರು.ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರೈತರ ಜೀವನಾಡಿಯಾಗಿದೆ. ಒಂದು ಹಂತದಲ್ಲಿ ಇದು ವಿಶ್ವಾಸ ಕಳೆದುಕೊಂಡಿತ್ತು. ಆದರೆ, ಜನಸಾಮಾನ್ಯರು ಈಗ ಅತಿ ಹೆಚ್ಚು ಠೇವಣಿ ಇಡುವುದರ ಮೂಲಕ ಬ್ಯಾಂಕ್ ಗೆ ಪುನರುಜ್ಜೀವನ ನೀಡಿದ್ದಾರೆ. ರೈತರ ಏಳಿಗೆಗಾಗಿ ಶ್ರಮಿಸಬೇಕಾದ ಬ್ಯಾಂಕ್ ನಲ್ಲಿ ಅಹಿತಕರ ಘಟನೆಗಳು ನಡೆದಾದ ಅಹೋರಾತ್ರಿ ನಾವು ಧರಣಿ ನಡೆಸಿದ್ದು, ಇನ್ನೂ ನೆನಪಿದೆ. ಈಗ ಬ್ಯಾಂಕ್ ಮತ್ತೆ ಲಾಭದತ್ತ ಮುನ್ನುಗ್ಗುತ್ತಿರುವುದು ಸಂತೋಷದ ವಿಷಯ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಸಹಕಾರಿಬ್ಯಾಂಕ್ ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಹಕಾರ ಕ್ಷೇತ್ರದಲ್ಲಿ ಸೇವೆಗೆ ಆದ್ಯತೆ ಇದೆ. ಸಹಕಾರ ಬ್ಯಾಂಕ್ ಗಳು ಒಂದು ರೀತಿಯಲ್ಲಿ ರೈತರ ಸೇವೆ ಮಾಡುತ್ತಾ ಬಂದಿವೆ. ಆದರೆ, ಬ್ಯಾಂಕ್ ಗಳು ಗಟ್ಟಿಗೊಳ್ಳಲು ಪ್ರಾಮಾಣಿಕತನ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಭಿವೃದ್ಧಿಯತ್ತ ಸಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ಸಹಕಾರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶಿವಮೊಗ್ಗ ಡಿಸಿಸಿ ಬ್ಯಾಂಕ್ 23 ಕೋಟಿ ರೂ. ಲಾಭಗಳಿಸಿರುವುದು ದಾಖಲೆಯಾಗಿದೆ. ಇದು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್ ಆಗಿದೆ. ಈಗ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ವಿತರಿಸುವ ಮೂಲಕ ಗಣಕೀಕರಣದ ಹಾದಿಯಲ್ಲಿದೆ. ಕಾಲ ಕಾಲಕ್ಕೆ ರೈತರಿಗೆ ಸಾಲ ನೀಡುವ ಮೂಲಕ ಮತ್ತು ವಸೂಲಾತಿ ಮೂಲಕವೂ ಬ್ಯಾಂಕ್ ಅಭಿವೃದ್ಧಿ ಸಾಧಿಸಿರುವುದಕ್ಕೆ ಅಭಿನಂದನೆಗಳು ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಹರತಾಳು ಹಾಲಪ್ಪ, ಕೆ.ಬಿ. ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ. ಉಪಾಧ್ಯಕ್ಷ ಹೆಚ್.ಎಲ್.ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…