
ಶಿವಮೊಗ್ಗ: ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳು ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅಂತಹವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.


ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ವಿನಾಕಾರಣ ಗಲಭೆ ಪ್ರಕರಣದಲ್ಲಿ ಪಾಲ್ಗೊಂಡ ಹಲವರನ್ನು ಈಗಾಗಲೇ ಬಂಧಿಸಲಾಗಿದೆ. ವಿನಾಕಾರಣ ಕೋಮುಗಲಭೆ ಸೃಷ್ಠಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಈ ಘಟನೆಯ ಹಿನ್ನಲೆಯನ್ನು ಇಟ್ಟುಕೊಂಡು ಸಮಗ್ರ ತನಿಖೆ ನಡೆಸಲಾಗುವುದು. ಯಾವ ಕಾರಣಕ್ಕಾಗಿ ಕೋಮು ಗಲಭೆ ಮಾಡುತ್ತಿದ್ದಾರೆ. ಇದರ ಹಿಂದೆ ಯಾರ ಕೈವಾಡವಿದೆ ಎಂದು ತಿಳಿಯಬೇಕಾಗಿದೆ ಎಂದರು.



ರಕ್ಷಣೆ ಮಾಡುವ ಪೊಲೀಸರ ಮೇಲೆಯೇ ಹಲ್ಲೆಯಾಗುತ್ತದೆ ಎಂದರೆ ಪೊಲೀಸ್ ಠಾಣೆಗೆ ನುಗ್ಗುತ್ತಾರೆ ಎಂದರೆ ಈ ಗೂಂಡಾ ಪ್ರವೃತ್ತಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಗೊತ್ತಾಗುತ್ತದೆ. ಹುಬ್ಬಳ್ಳಿಯಲ್ಲಿ ಅಶಾಂತಿ ವಾತಾವರಣದ ಹಿಂದೆ ಷಡ್ಯಂತ್ರವಿದೆ. ಇದೊಂದು ಅಕ್ಷಮ್ಯ ಅಪರಾಧ. ಯಾವುದೇ ಕಾರಣಕ್ಕೂ ಸರ್ಕಾರ ಇದನ್ನು ಸಹಿಸುವುದಿಲ್ಲ ಎಂದರು.ಮುಖ್ಯಮಂತ್ರಿಗಳು ಈಗಾಗಲೇ ಬಿಗಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನುಮುಂದೆ ಈ ರೀತಿಯ ಘಟನೆಗಳು ಆಗದಂತೆ ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.