ಶಿವಮೊಗ್ಗ: ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕಾದಲ್ಲಿ ಆರೋಗ್ಯದ ಬಗ್ಗೆ ಕಾಳಜಿಯು ಅತ್ಯಂತ ಅವಶ್ಯಕ. ಮಕ್ಕಳ ಆರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದು ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಜಯಂತಿ ವಾಲಿ ಹೇಳಿದರು.

ಶಿವಮೊಗ್ಗ ತಾಲೂಕಿನ ಬಸವನ ಗಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಶುದ್ಧ ಕುಡಿಯುವ ನೀರಿನ ಆರ್‌ಒ ಪ್ಲಾಂಟ್ ಘಟಕವನ್ನು ಕೊಡುಗೆ ನೀಡಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಪ್ರತಿ ನಿತ್ಯ ಶುದ್ಧ ಕುಡಿಯುವ ನೀರಿನ ಅಗತ್ಯವಿದ್ದು, ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಆಶಯದಿಂದ ಘಟಕ ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ ಎಲ್ಲ ಸರ್ಕಾರಿ ಶಾಲೆಗಳಲ್ಲಿಯು ಮಕ್ಕಳಿಗೆ ಶುದ್ಧ ಕುಡಿಯುವ ನೀರು ಸಿಗುವಂತಾಗಬೇಕು ಎಂದು ತಿಳಿಸಿದರು.

ಇನ್ನರ್‌ವ್ಹೀಲ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಸೇವಾ ಕಾರ್ಯ ನಡೆಸಲಾಗಿದೆ. ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದರು.
ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಬಡ ಮಹಿಳೆಯರಿಗೆ ನಮ್ಮ ಸಂಸ್ಥೆ ವತಿಯಿಂದ ಹೊಲಿಗೆ ಯಂತ್ರ, ಬೀದಿಬದಿ ವ್ಯಾಪಾರಿಗಳಿಗೆ ನೆರಳಿಗೆ ಅನುಕೂಲವಾಗುವಂತೆ ಛತ್ರಿ, ಹಾಗೂ ಮಹಿಳಾ ಸಬಲೀಕರಣದ ಕುರಿತಾಗಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಬಸವನಗಂಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 45 ಸಾವಿರ ರೂ. ಮೌಲ್ಯದ ಶುದ್ಧ ಕುಡಿಯುವ ನೀರಿನ ಆರ್‌ಒ ಪ್ಲಾಂಟ್ ಕೊಡುಗೆ ನೀಡಲಾಯಿತು.
ಬಸವನ ಗಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ವಿದ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಶಾಲೆಯ ಎಸ್‌ಡಿಎಂಎಸಿ ಅಧ್ಯಕ್ಷ ನಟರಾಜ್, ರುದ್ರಮೂರ್ತಿ, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಖಜಾಂಚಿ ರಾಜೇಶ್ವರಿ ಪ್ರತಾಪ್, ಸುನಂದಾ ಜಗದೀಶ್, ವೀಣಾ ಸುರೇಶ್, ಹನುಮಂತಪ್ಪ, ನಾಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…