ಶಿವಮೊಗ್ಗ: ಪೂರ್ಣ ಬಹುಮತವಿಲ್ಲದೇ ಕಲಸುಮೇಲೋಗರ ರೀತಿಯಲ್ಲಿ ಅಧಿಕಾರಕ್ಕೆ ಬಿಜೆಪಿ ಬರಬಾರದು. ಪೂರ್ಣಬಹುಮತದ ಸರ್ಕಾರ ಬಿಜೆಪಿಗೆ ಬೇಕಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾರೆ ನಿಜ. ಆದರೆ, ಇವರೆಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಪೂರ್ಣ ಬಹುಮತವಿಲ್ಲದ ಸರ್ಕಾರದಲ್ಲಿ ಅಧಿಕಾರ ನಡೆಸಿದ್ದಾರೆ. ಈ ತಾಪತ್ರಯ ನಮಗೆ ಇನ್ನು ಬೇಡ. ಪರಿಪೂರ್ಣ ಬಹುಮತದ ಸರ್ಕಾರ ಬೇಕಾಗಿದೆ ಎಂದರು.ಅನೇಕರು ನಮ್ಮ ಪಕ್ಷಕ್ಕೆ ಬರುವ ಅಪೇಕ್ಷೆ ಪಡುತ್ತಾರೆ. ನಾವೇನು ಅವರನ್ನು ಕರೆದಿರುವುದಿಲ್ಲ. ಅವರು ಏಕೆ ಬರುತ್ತಾರೆ ಎಂದು ಗೊತ್ತೇ ಇದೆ. ತಮ್ಮ ಮುಂದಿನ ಭವಿಷ್ಯ ನಿಗದಿ ಮಾಡಿಕೊಂಡೇ ಪಕ್ಷಕ್ಕೆ ಕಾಳಿಡುತ್ತಾಋಎ. ಬಿಜೆಪಿ 108 ಸ್ಥಾನಗಳನ್ನು ಗೆದ್ದರೂ ಕೂಡ ಸ್ಪಷ್ಟ ಬಹುಮತ ಪಡೆಯಲು ಇದುವರೆಗೆ ಸೋತಿದೆ. ಇನ್ನು ಹಾಗೆ ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದರು.
ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಇದ್ದಾರೆ. ಇವರೆಲ್ಲ ಈ ಮಣ್ಣಿನಲ್ಲೇ ಹುಟ್ಟಿದವರು. ಈ ಮಣ್ಣಿನಲ್ಲೇ ಸಾಯುತ್ತಾರೆ. ಎಲ್ಲರನ್ನೂ ಒಟ್ಟಾಗಿ ನಾವು ಕಾಣಬೇಕಾಗಿದೆ. ವಿಶೇಷವಾಗಿ ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲಿ ಯಾರೂ ಕೆಟ್ಟವರಲ್ಲ, ಕೆಲವರು ಮಾತ್ರ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದರು.ಕಾಂಗ್ರೆಸ್ ನವರು ಮೇಕೆದಾಟು, ಜೆಡಿಎಸ್ ನವರು ಜನತಾ ಜಲಧಾರೆ ಹಿಡಿದುಕೊಂಡು ರಾಜ್ಯವನ್ನೇ ಸುತ್ತುತ್ತಿದ್ದಾರೆ. ಇದು ಚುನಾವಣಾ ಗಿಮಿಕ್ ಎಂದು ಎಲ್ಲರಿಗೂ ಗೊತ್ತು. ಇವರ ಈ ಸುತ್ತಾಟ ಒಂದೇ ಒಂದು ವೋಟು ತಂದುಕೊಡುವುದಿಲ್ಲ. ಇಂತಹ ಗಿಮಿಕ್ ಗಳಿಗೆಲ್ಲ ಚುನಾವಣೆ ಫಲಿತಾಂಶವೇ ಉತ್ತರ ಹೇಳುತ್ತದೆ. ಈಗಾಗಲೇ ಗ್ರಾಪಂ ಚುನಾವಣಾ ಫಲಿತಾಂಶ ಅವರಿಗೆ ಪಾಠವಾಗಬೇಕು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಬಾಕ್ಸ್:ಪ್ರಧಾನಿಯಿಂದ ಗ್ರಾಮೀಣಾಭಿವೃದ್ಧಿ ಪ್ರಧಾನಿ ಮೋದಿ ಅವರು ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲೂ ಗ್ರಾಮೀಣಾಭಿವೃದ್ಧಿ ಹಿನ್ನಲೆಯಲ್ಲಿಯೇ ಪ್ರಯಾಣ ಬೆಳೆಸಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಭೋವಿ ಸಮಾಜದ ಸಮುದಾಯಭವನದಲ್ಲಿ ಸ್ವಾಮೀಜಿಗಳ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಸಮಸ್ಯೆಗಳು ಬಗೆಹರಿಸಲು ಹಲವು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿವೆ. ಮುಖ್ಯವಾಗಿ ಕೇಂದ್ರದಿಂದ ಜಲಜೀವನ್ ಮಿಷನ್, ನರೇಗಾ, ರಸ್ತೆ ಅಭಿವೃದ್ಧಿ, ಉದ್ಯೋಗ, ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ಮುಂದಿನ ಒಂದು ವರ್ಷದಲ್ಲಿ ರಾಜ್ಯದ ಪ್ರತಿ ಮನೆಗೂ ನಲ್ಲಿಯ ಮೂಲಕ ನೀರು ಸರಬರಾಜು ಮಾಡಲಾಗವುದು ಎಂದರು.