ಬೆಂಗಳೂರು ಏಪ್ರಿಲ್ 25 ರಂದು ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಜಿ ಸಚಿವರಾದ ಹೆಚ್. ಡಿ ರೇವಣ್ಣನವರು ಹಾಸನ ತಾಲ್ಲೂಕು ಪಂಚಾಯತಿಯ ಪ್ರಭಾರ ಅಧಿಕಾರಿಗಳಾದ ಡಾಕ್ಟರ್ ಯಶವಂತ್ ಅವರನ್ನು ಏಕವಚನದಲ್ಲಿ ಮಾತನಾಡಿ ಪಶುವೈದ್ಯರನ್ನು ಅವಹೇಳನಕಾರಿಯಾಗಿ ಮಾತಾಡಿರುವುದನ್ನು ಕರ್ನಾಟಕ ಪಶುವೈದ್ಯಕೀಯ ಸಂಘ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಪಶುವೈದ್ಯಕೀಯ ಸಂಘ ಬಿಡುಗಡೆಗೊಳಿಸಿದೆ. ಮೂಲತಃ ಗ್ರಾಮೀಣ ಪ್ರದೇಶದಿಂದ ಬಂದು ರೈತರ ಸಂಪತ್ತಾದ ಜಾನುವಾರುಗಳನ್ನು ಹೊಂದಿದ್ದರೂ ಸಹ, ಜಾನುವಾರುಗಳನ್ನು ಚಿಕಿತ್ಸೆ ನೀಡುವ ಪಶುವೈದ್ಯರನ್ನು ದನಗಳಿಗೆ ಹೋಲಿಸುತ್ತಾ ಪಶುವೈದ್ಯರನ್ನು ದನದ ಡಾಕ್ಟರ್ ದನ ಕಾಯಿ ಹೀಗೆ ಹಲವಾರು ಅವಾಚ್ಯ ಶಬ್ದಗಳನ್ನು ಉಪಯೋಗಿಸಿ, ಪಶುವೈದ್ಯರಿಗೆ ಮತ್ತು ರೈತರ ಸಂಪತ್ತಾದ ಜಾನುವಾರುಗಳಿಗೆ ಅವಹೇಳನ ಮಾಡಿದ್ದಾರೆ. ಮಣ್ಣಿನ ಮಗನೆಂದು ಖ್ಯಾತಿಯನ್ನು ಪಡೆದ ಈ ದೇಶದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಸುಪುತ್ರರಾಗಿ, ಇಂತಹ ಮಾತುಗಳನ್ನು ಆಡಿರುವುದು ನಿಜವಾಗಿಯೂ ಬೇಸರ ತಂದಿದೆ, ಮತ್ತು ಮನು ಕುಲದ ರೈತರ ಜನಾಂಗಕ್ಕೆ ಹಾಗೂ ಹೈನುಗಾರಿಕೆಯನ್ನೆ ಸ್ವಾವಲಂಬಿ ಜೀವನಕ್ಕಾಗಿ ಅವಲಂಬಿಸಿರುವ ನಮ್ಮ ರೈತಾಪಿ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಪಶುವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ಎಸ್.ಸಿ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಿವರಾಮ್ ಎ.ಡಿ ಮಾತನಾಡಿ, ಮಾಜಿ ಸಚಿವರಾದ ಹೆಚ್ ಡಿ ರೇವಣ್ಣ ನಿಂದಿಸಿರುವ ರೀತಿ ಸರಿಯಲ್ಲ. ರೈತರ ಸೇವೆ ಸಲ್ಲಿಸುತ್ತಿರುವ ನಾವು ದನದ ಡಾಕ್ಟರ್ ಎಂದು ಕರೆಸಿಕೊಳ್ಳಲು ಸಂತಸವಾಗುತ್ತದೆ. 5 ವರ್ಷಗಳ ಕಾಲ ಪದವಿಯನ್ನು ನೆರವೇರಿಸಿ ನಾವು ಈ ಹುದ್ದೇಗೇರಿರುತ್ತೇವೆ. ಪಶುವೈದ್ಯರು ಧನಗಳಿಗಷ್ಟೆ ನಾವು ಚಿಕಿತ್ಸೆ ಮಾಡುವುದಿಲ್ಲ ಕಾಡಿನ ಮತ್ತು “ಜೂ (Zoo)ನಲ್ಲಿ ಇರುವಂತಹ ಕಾಡು ಪ್ರಾಣಿಗಳಾದಂತಹ ಹುಲಿ, ಸಿಂಹ, ಆನೆ, ಚಿರತೆ, ಸಾಕು ಪ್ರಾಣಿಗಳು ಪೆಟ್ ಎಲ್ಲಾ ಪ್ರಾಣಿ ಸಂಕುಲಗಳಿಗೆ ಕೂಡ ಚಿಕಿತ್ಸೆ ಮಾಡಿದ್ದೇವೆ, ಮಾಡುತ್ತಿದ್ದೇವೆ, ತಾವು ಸಚಿವರಾಗಿದ್ದಾಗ ತಮ್ಮ ತಮ್ಮ ಮನೆಯಲ್ಲಿ ಧನಗಳನ್ನು ಸಾಕಿದ್ದಿರಿ ಬೆಳಿಗ್ಗೆ ಬೆಳಿಗ್ಗೆ ಎದ್ದು ಅವುಗಳನ್ನು ಗೋವುಗಳೆಂದು ನಮಸ್ಕಾರ ಮಾಡಿ ಹೊರಡುತ್ತಿದ್ದೀರಿ, ಅದು ನಿಮಗೆ ಅರಿವಿಲ್ಲದಂತೆ ಆಗಿದೆ. ಗೋವುಗಳನ್ನು ಸಾಕಿದಂತೆ ಹುಲಿ, ಸಿಂಹ, ಆನೆಗಳನ್ನು ಸಾಕಿ ಅವುಗಳಿಗೂ ಸಹ ನಾವೇ ಬಂದು ಚಿಕಿತ್ಸೆ ನೀಡುತ್ತೇವೆ. ಆಗ ನಮ್ಮನ್ನು ನೀವು ದನದ ಡಾಕ್ಟರ್ ಅನ್ನುವುದರ ಬದಲು ಹುಲಿ ಡಾಕ್ಟರ್ ಎಂದು ಕರೆಯಿರಿ ಎಂದು ಹೇಳಿದ್ದಾರೆ.
ಪಶುವೈದ್ಯ ಪಧವಿದರರು ಹಾಗೂ ಪಶು ವೈದ್ಯಕೀಯ ವೃತ್ತಿಯಲ್ಲಿದ್ದುಕೊಂಡು ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿರುವಂತಹ ೧೧೦ ಕ್ಕೂ ಹೆಚ್ಚು ಪಶುವೈದ್ಯರು ಐ.ಎ.ಎಸ್. / ಕೆ.ಎ.ಎಸ್. ಪರಿಕ್ಷೆ ಪಾಸು ಮಾಡಿ ಅತ್ಯುನ್ನತ ಪದವಿಗಳನ್ನು ಪಡೆದು ರಾಜ್ಯದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದು ತಮ್ಮ ಗಮನಕ್ಕೆ ಇರಲಿ ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಬುದ್ಧಿವಂತಿಕೆ ಬೇಕು. ಪಧವಿಗೆ ಸೇರಿದ ಪ್ರತಿಯೊಬ್ಬ ವೈದ್ಯರು ಸಹ ಸಮಾಜದಲ್ಲಿ ಪ್ರಪ್ರಥಮ ಪ್ರಜೆಗಳು ಅವರೆಲ್ಲರೂ ಕೂಡ ಉತ್ತಮ ಅಂಕಗಳನ್ನು ಪಡೆದು ಪಧವಿಗೆ ಸೇರಿರುತ್ತಾರೆ ಎಂಬುದು ಕೂಡ ತಾವು ತಿಳಿದುಕೊಳ್ಳಬೇಕಾಗುತ್ತದೆ ಸಂಘದ ಕಾರ್ಯದರ್ಶಿಗಳಾದ ಡಾ. ಗೋವಿಂದಪ್ಪ. ಪಿ ಹೇಳಿದ್ದಾರೆ.
ಶಾಸಕರಾಗಿ ಅನೇಕ ಬಾರಿ ಮಾಜಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು ಹೀಗೆ ಅಮಾನವೀಯವಾಗಿ ವರ್ತಿಸಿರುವುದು ನಿಮ್ಮ ಘನತೆಗೆ ತಕ್ಕದಲ್ಲ. ಆದುದರಿಂದ ಕರ್ನಾಟಕ ಪಶುವೈದ್ಯಕೀಯ ಸಂಘವು ಈ ಮೂಲಕ ಶ್ರೀಯುತ ಹೆಚ್.ಡಿ ರೇವಣ್ಣ ರವರು ಬಹಿರಂಗ ಕ್ಷಮೆಯಾಚಿಸಿ, ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಬೇಕೆಂದು ಸಂಘವು ಒತ್ತಾಯಿಸುತ್ತದೆ.
ರೈತರಿಗೆ ಸೇವೆ ಸಲ್ಲಿಸುತ್ತಿರುವ ಪಶುವೈದ್ಯರನ್ನು ನಿಂದಿಸಿರುವುದಕ್ಕೆ ಹೆಚ್.ಡಿ ರೇವಣ್ಣ ಅವರು ಬೇಷರತ್ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ, ದಿನಾಂಕ: 30-04-2022 ರಂದು ಪಶುವೈದ್ಯರ ದಿನದಂದು, ಸಾಂಕೇತಿಕವಾಗಿ ರಾಜ್ಯಾದ್ಯಂತ ಕಪ್ಪು ಬಟ್ಟೆಯನ್ನು ಧರಿಸುವುದರ ಮುಖಾಂತರ ಪ್ರತಿಭಟನೆ ನಡೆಸಬೇಕಾಗುತ್ತದೆ. ಅದಕ್ಕೂ ತಾವು ಪ್ರತಿಕ್ರೀಯೆ ನೀಡದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.