ಶಿವಮೊಗ್ಗ: ನಗರದಲ್ಲಿ ಅಶಾಂತಿ ಹುಟ್ಟಿಸುವ ಮತಾಂಧ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಇಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ರವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ಜಿಲ್ಲೆ ಶಾಂತಿಗೆ ಹೆಸರಾಗಿದೆ. ಆದರೆ, ಕಳೆದ ಮೂರು ತಿಂಗಳಿಂದ ಪ್ರಶಾಂತವಾಗಿದ್ದ ಶಿವಮೊಗ್ಗ ನಗರದಲ್ಲಿ ಅನ್ಯಕೋಮಿನ ಕೆಲವು ವ್ಯಕ್ತಿಗಳು ಅಶಾಂತಿ ಸೃಷ್ಠಿಸುತ್ತಿದ್ದಾರೆ. ಹಿಂದೂ ಸಂಘಟನೆ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿವೆ. ಇದರಿಂದ ಭಯದ ವಾತಾವರಣವಿದೆ ಎಂದು ಮನವಿದಾರರು ತಿಳಿಸಿದ್ದಾರೆ.ಇತ್ತೀಚೆಗೆ ಮಂಜುನಾಥ ಬಡಾವಣೆಯ ರಾಹುಲ್ ಮತ್ತು ಸಚಿನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಹಿಂದೂ ಹರ್ಷನನ್ನು ಹತ್ಯೆ ಮಾಡಲಾಗಿದೆ. ಅನುಪಿನ ಕಟ್ಟ ಬಳಿ ಇಬ್ಬರು ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಮಂಜುನಾಥ ಬಡಾವಣೆ ನಿವಾಸಿ ವೆಂಕಟೇಶ್ ಮೇಲೆ ಹಲ್ಲೆ ನಡೆದಿದೆ.

ಗೋಪಾಲಗೌಡ ಬಡಾವಣೆಯಲ್ಲಿ ನಾಗರಾಜ್ ಎಂಬುವವರ ಮೇಲೆ, ಬಜರಂಗದಳದ ಜಿತೇಂದ್ರ ಅವರ ಮೇಲೆ ಹಲ್ಲೆ ಮತ್ತು ಧಮಕಿ ಹಾಕಲಾಗಿದೆ. ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನೌಕರ ಸಂತೋಷ್, ಹೊನ್ನಾಳಿ ರಸ್ತೆಯ ಪವನ್ ಕುಮಾರ್, ಬಜರಂಗದಳ ಕಾರ್ಯಕರ್ತ ಭರತ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಎಂಕೆಕೆ ರಸ್ತೆಯ ಅಕ್ಷಯ್ ಜೋಯ್ಸ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮೇಲ್ಕಂಡ ಎಲ್ಲಾ ಘಟನೆಗಳಿಗೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಸಾರ್ವಜನಿಕರಲ್ಲಿ ಅಶಾಂತಿ ಹುಟ್ಟಿಸುವ ಭಯದ ವಾತಾವರಣ ಸೃಷ್ಠಿಸಿರುವ ನೆಮ್ಮದಿಗೆ ಭಂಗ ತಂದಿರುವ ವ್ಯಕ್ತಿಗಳ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿ ಅವರನ್ನು ಗಡೀಪಾರು ಮಾಡಬೇಕು. ಪೊಲೀಸ್ ಕಾವಲು ಹೆಚ್ಚಿಸಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಗಾಂಜಾ ಜೂಜು ಮಟ್ಕಾಗಳನ್ನು ಬಂದ್ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಚನ್ನಬಸಪ್ಪ, ಜ್ಞಾನೇಶ್ವರ್, ನಾಗರಾಜ್, ದೀನದಯಾಳ್, ಶಂಕರ್ ನಾಯಕ್, ಡಿ. ಮೋಹನ್ ರೆಡ್ಡಿ, ಬಳ್ಳೆಕೆರೆ ಸಂತೋಷ್, ರಾಹುಲ್ ಬಿದರೆ, ಸುರೇಖಾ ಮುರಳೀಧರ್, ಪ್ರಭಾ, ರವಿಕುಕಮಾರ್, ಕಿರಣ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…