ಬೆಂಗಳೂರು ಏಪ್ರಿಲ್‌ 28: ಇ-ತ್ಯಾಜ್ಯ ಹಾಗೂ ವಿದ್ಯುನ್ಮಾನ ತ್ಯಾಜ್ಯ ಮರುಬಳಕೆ ಹಾಗೂ ನಿರ್ವಹಣೆಯ ಕ್ಷೇತ್ರದ ದೇಶದಲ್ಲೇ ದೊಡ್ಡ ಎಕ್ಸ್ಪೋ ರಿ ಕಾಮರ್ಸ್‌ 2022 ನ್ನು ಮೇ 18, 19 ಮತ್ತು 20 ರಂದು ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಉರ್ಧವ ಮ್ಯಾನೇಜ್‌ಮೆಂಟ್‌ ನ ಸಂಸ್ಥಾಪಕರಾದ ವೆಂಕಟ ರೆಡ್ಡಿ ತಿಳಿಸಿದರು.

ಇಂದು ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳಿಂದ ಉತ್ಪತ್ತಿಯಾಗುವಂತಹ ತ್ಯಾಜ್ಯವನ್ನು ನಿರ್ವಹಣೆ ಮತ್ತು ಮರುಬಳಕೆ ಮಾಡುವ ಪರಿಸರವನ್ನು ನಿರ್ಮಿಸುವ ಉದ್ದೇಶದಿಂದ 2018 ರಲ್ಲಿ ಮೊದಲ ಬಾರಿಗೆ ರಿ ಕಾಮರ್ಸ್‌ ಎಕ್ಸ್ಪೋವನ್ನು ಆಯೋಜಿಸಲಾಗಿತ್ತು. ಮೇ 18,19 ಮತ್ತು 20 ರಂದು ಇದರ ಮೂರನೇ ಆವೃತ್ತಿಯ ಎಕ್ಸ್ಪೋವನ್ನು ಲಲಿತ್‌ ಅಶೋಕ್‌ ಹೋಟೇಲ್‌ನಲ್ಲಿ ಆಯೋಜಿಸಲಾಗಿದೆ. ಮೊದಲ ದಿನ ಇ-ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ, ಎರಡನೇ ದಿನ ಬ್ಯಾಟರಿ ತ್ಯಾಜ್ಯ ಮರುಬಳಕೆ ಮತ್ತು ನಿರ್ವಹಣೆ ಮತ್ತು ಮೂರನೇ ದಿನ ವಾಹನಗಳ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆಯ ಬಗ್ಗೆ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ವಿಶ್ವದ ಪ್ರಮುಖ ಮರುಬಳಕೆಯ ಉದ್ಯಮಿಗಳೂ, ತ್ಯಾಜ್ಯ ಉತ್ಪಾದಕರು, ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿರುವ ಪ್ರಮುಖ ಉದ್ಯೋಗಿಗಳು, ವಿಜ್ಞಾನಿಗಳು, ಸಂಶೋಧಕರು ಮತ್ತು ಸರಕಾರದ ಇಲಾಖೆಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು. ತ್ಯಾಜ್ಯ ಮರುಬಳಕೆಯ ಮತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಆಗುತ್ತಿರುವ ನೂತನ ತಂತ್ರಜ್ಞಾನ, ಸಂಶೋದನೆ, ಪ್ರಸ್ತುತ ಮತ್ತು ಮುಂದೆ ಬರಲಿರುವ ನೀತಿ ಹಾಗೂ ಕಾನೂನುಗಳ ಬಗ್ಗೆ ಚರ್ಚಿಸುವುದು. ಭಾರತದಲ್ಲಿ ಸಂಘಟಿತ ಕ್ಷೇತ್ರವನ್ನಾಗಿ ತ್ಯಾಜ್ಯ ನಿರ್ವಹಣೆಯನ್ನು ಬೆಳೆಸುವ ಪ್ರಮುಖ ಉದ್ದೇಶವನ್ನು ನಾವು ಹೊಂದಿದ್ದೇವೆ. ಅಲ್ಲದೆ, ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವವ ಮಧ್ಯದ ಅಂತರವನ್ನು ಕಡಿಮೆ ಮಾಡುವ ಗುರಿಯನ್ನ ಹೊಂದಿದ್ದೇವೆ ಎಂದು ಹೇಳಿದರು.

ಕಾಸಿಯಾ, ಆಲ್‌ ಇಂಡಿಯಾ ಅಸೋಸಿಯೇಷನ್‌ ಆಫ್‌ ಇಂಡಸ್ಟ್ರೀಸ್‌, ಅಸೋಸಿಯೇಷನ್‌ ಫಾರ್‌ ಇನ್‌ಪಾರ್‌ಮೇಷನ್‌ ಟೆಕ್ನಾಲಜಿ, ಕನ್ಸೋರ್ಷಿಮ್‌ ಆಫ್‌ ಎಲೆಕ್ಟ್ರಾನಿಕ್‌ ಇಂಡಸ್ಟ್ರೀಸ್‌ ಆಫ್‌ ಕರ್ನಾಟಕ, ಫೆಡರೇಷನ್‌ ಆಫ್‌ ಇಂಡಿಯನ್‌ ಸ್ಮಾಲ್‌ ಸ್ಕೇಲ್‌ ಬ್ಯಾಟರಿ ಅಸೋಷಿಯೇಸ್‌ ಹೀಗೆ ಹತ್ತು ಹಲವು ಪ್ರಮುಖ ಸಂಸ್ಥೆಗಳು ಈ ಎಕ್ಸ್ಪೋ ಜೊತೆಗೆ ಕೈಜೋಡಿಸಿವೆ.

ದಿನೇ ದಿನೇ ಹೆಚ್ಚಾಗುತ್ತಿರುವ ಇ-ತ್ಯಾಜ್ಯ ನಿರ್ವಹಣೆ ಒಂದು ಸವಾಲಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ಕ್ಷೇತ್ರದಲ್ಲಿರುವ ನೂರಾರು ಪರಿಣತರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ನೂತನ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಅಳವಡಿಕೆಯ ಬಗ್ಗೆ ವಿಸ್ತ್ರುತ ಚರ್ಚೆ ನಡೆಸುವ ವೇದಿಕೆ ಇದಾಗಿರಲಿದೆ ಎಂದು ಉರ್ಧವ ಮ್ಯಾನೇಜ್‌ಮೆಂಟ್‌ ನ ಸಂಸ್ಥಾಪಕರಾದ ವೆಂಕಟ ರೆಡ್ಡಿ ಹೇಳಿದರು.

ವರದಿ ಹರೀಶ ಶೆಟ್ಟಿ ಬೆಂಗಳೂರು…