ಕಾರವಾರ ನ್ಯೂಸ್…
ಕಾರವಾರ: ಸದ್ಯದ ಮಟ್ಟಿಗೆ ರಾಜಕೀಯಕ್ಕೆ ಬಂದು ಚುನಾವಣೆಗೆ ನಿಲ್ಲುವ ಯಾವುದೇ ಚಿಂತನೆಯಿಲ್ಲ, ರಾಜ್ಯಾಧ್ಯಕ್ಷನಾಗಿ ನೌಕರರ ಸೇವೆ ಮಾಡುತ್ತೇನೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿದ್ದಾರೆ.
ಕಾರವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾನು ರಾಜಕೀಯಕ್ಕೆ ಬಂದು ಮುಂದಿನ ಚುನಾವಣೆಯಲ್ಲಿ ನಿಲ್ಲುತ್ತೇನೆ ಎನ್ನುವ ಸುದ್ದಿ ಕೆಲ ಪತ್ರಿಕೆಯಲ್ಲಿ ಬಂದಿದೆ.ಇಂತಹ ಯಾವ ಚಿಂತನೆಯನ್ನು ಮಾಡಿಲ್ಲ ಎಂದಿದ್ದಾರೆ.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ರಾಜಕೀಯಕ್ಕೆ ಹೋದ ಹಲವರನ್ನ ನೋಡಿದ್ದೇನೆ. ಮೂರ್ನಾಲ್ಕು ಚುನಾವಣೆ ಸೋತು ಶಾಸಕರಾದರನ್ನ ಸಹ ನ಼ೋಡಿದ್ದೇನೆ. ರಾಜಕೀಯಕ್ಕೆ ಬಂದು ಚುನಾವಣೆ ಎದುರಿಸುವ ಯಾವ ಆಸಕ್ತಿ ತನ್ನ ಮೇಲಿಲ್ಲ.
ಎಂಟು ವರ್ಷ ನೌಕರರ ಸಂಘದ ಜಿಲ್ಲಾಧ್ಯಕ್ಷನಾಗಿ ಎರಡುವರೆ ವರ್ಷದಿಂದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಆರು ಲಕ್ಷ ನೌಕರರು ಹೊಂದಿರುವ ಸಂಘಟನೆ ಅಧ್ಯಕ್ಷನಾಗಿದ್ದೇನೆ. ಸುಮಾರು ೫೦ ಲಕ್ಷ ಜನ ನೌಕರರ ಕುಟುಂಬದವರು ಇದ್ದಾರೆ.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹುದ್ದೆ ಎಂಎಲ್.ಎ ಗಿಂತ ದೊಡ್ಡದಿದೆ. ಸಚಿವ ಸ್ಥಾನಕ್ಕೆ ಸಮನಾಗಿದ್ದು ಕೆಲಸ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ರಾಜ್ಯದ ಯಾವ ಭಾಗಕ್ಕೆ ಹೋದರು ಗೌರವ ಸಿಗುವ ಹುದ್ದೆಯಾಗಿದ್ದು, ಮುಂದೆ ಸಹ ನೌಕರರ ಸಮಸ್ಯೆ ಬಗ್ಗೆ ಧ್ವನಿಯಾಗಿ ದುಡಿಯುತ್ತೇನೆ ಎಂದಿದ್ದಾರೆ.
ಏಳನೇ ವೇತನ ಆಯೋಗ ಶೀಘ್ರ ಜಾರಿ…
ಸರ್ಕಾರಿ ನೌಕರರ ಹಲವು ದಿನದ ಬೇಡಿಕೆಯಾಗಿದ್ದ ಏಳನೇ ವೇತನ ಆಯೋಗ ಶೀಘ್ರ ಜಾರಿಯಾಗುವುದು ಎಂದು ಷಡಕ್ಷರಿ ತಿಳಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಣೆ ಮಾಡಿದ್ದು ಇದು ನೌಕರರಿಗೆ ಖುಷಿ ನೀಡಿದೆ. ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಇದಲ್ಲದೇ ನೌಕರರ ಮತ್ತೊಂದು ಬೇಡಿಕೆ ಓ.ಪಿ.ಎಸ್ ಸಹ ಜಾರಿಗೆ ತರಲು ಪ್ರಯತ್ನ ನಡೆಸಲಾಗುವುದು ಎಂದು ಷಡಕ್ಷರಿ ತಿಳಿಸಿದ್ದಾರೆ.