ಶಿವಮೊಗ್ಗ: ಮಹಿಳೆಯರ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ದೃಷ್ಠಿಯಿಂದ ನಾಲ್ವರು ಮಹಿಳೆಯರು ನಡೆಯುತ್ತಿರುವ ಬೈಕ್ ಪ್ರಯಾಣದ ಸಾಹಸ ಶ್ಲಾಘನೀಯ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಜಿ. ರಾಮಚಂದ್ರಮೂರ್ತಿ ಹೇಳಿದರು.

ಶಿವಮೊಗ್ಗ ನಗರಕ್ಕೆ ಆಗಮಿಸಿದ ರೋಟರಿ ಕ್ಲಬ್ ಆಫ್ ಬೆಂಗಳೂರು ಸಖಿ ಮಹಿಳಾ ಸದಸ್ಯರನ್ನು ಸ್ವಾಗತಿಸಿ ಮಾತನಾಡಿ, ರೋಟರಿ ಕ್ಲಬ್ ಮಹಿಳಾ ಸದಸ್ಯರು ರಾಜ್ಯಾದ್ಯಂತ 30 ಜಿಲ್ಲೆಗಳಿಗೆ ಬೈಕಿನಲ್ಲಿ ಸಂಚರಿಸಿ ಮಹಿಳೆಯರ ಭಯ ಮುಕ್ತ ಕರ್ನಾಟಕ ಅಭಿಯಾನದಡಿ ನಗರ ಮತ್ತು ಹಳ್ಳಿಗಳಲ್ಲಿ ಮಹಿಳೆಯರ ಕುಂದುಕೊರತೆ ಆಲಿಸಿ ಸ್ವಯಂ ರಕ್ಷಣೆ ಆತ್ಮಸ್ಥೆöÊರ್ಯ ಹಾಗೂ ಮಹಿಳಾ ಸಬಲೀಕರಣದ ವಿಚಾರವಾಗಿ ಮಾಹಿತಿ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಅಭಿನಂದನೀಯ. ಪ್ರತಿ ಜಿಲ್ಲೆಯಲ್ಲಿ ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ಅರಿವನ್ನು ಎಲ್ಲರಲ್ಲೂ ಮೂಡಿಸುವ ನಿಟ್ಟಿನಲ್ಲಿ ಅಭಿಯಾನದ ಮೂಲಕ ಸಂದೇಶ ಸಾರಲಾಗುತ್ತಿದೆ ಎಂದರು.
ರೋಟರಿ ಕ್ಲಬ್ ಆಫ್ ಬೆಂಗಳೂರು ಸಖಿ ಮಹಿಳಾ ಸದಸ್ಯರು ರಾಜ್ಯಾದ್ಯಂತ ಬೈಕ್ ಪ್ರಯಾಣದ ಮೂಲಕ ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಶಿವಮೊಗ್ಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಹಾಗೂ ಶಿವಮೊಗ್ಗ ಇನ್ನರ್‌ವ್ಹೀಲ್ ಕ್ಲಬ್ ಸದಸ್ಯರು ಸ್ವಾಗತಿಸಿ ಶುಭಕೋರಿದರು.

ನಂತರ ನಗರದ ಶುಭಂ ಹೋಟೆಲ್‌ನಲ್ಲಿ ಶಿವಮೊಗ್ಗದ ಇನ್ನರ್‌ವ್ಹೀಲ್ ಕ್ಲಬ್ ಸದಸ್ಯರು ಹಾಗೂ ರೋಟರಿ ಸದಸ್ಯರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೈಕ್ ರೈಡರ್ ಸಾಹಸಿಗಳಾದ ರಾಜಲಕ್ಷ್ಮಿ, ಕೀರ್ತಿನಿ, ಸ್ವಾತಿ ಮತ್ತು ಅನಿತಾ ಅವರು ಪಾಲ್ಗೊಂಡಿದ್ದರು. ಇದೇ ವೇಳೆ ಮಹಿಳಾ ಬೈಕ್ ರೈಡರ್ಸ್ಗಳಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.
ರೋಟರಿ ಇ-ಕ್ಲಬ್ ಸದಸ್ಯೆ ಹಾಗೂ ಬೈಕ್ ರೈಡ್ ಸಾಹಸಿ ಮಹಿಳೆ ರಾಜಲಕ್ಷ್ಮಿ ಮಾತನಾಡಿ, ವಿಸಖಿ “ವುಮೆನ್ ಆನ್ ವೀಲ್ಸ್”, ರೋಟರಿ ಇ-ಕ್ಲಬ್ ಆಫ್ ಬೆಂಗಳೂರು ಸಖಿ ಮತ್ತು ರೋಟರಿ ಕ್ಲಬ್ ಆಫ್ ಬೆಂಗಳೂರು ಮಾಲ್ಗುಡಿಯ ಸಹಯೋಗದಲ್ಲಿ ಮಹಿಳೆಯರ ಭಯಮುಕ್ತ ಕರ್ನಾಟಕ ಜಾಗೃತಿ ಅಭಿಯಾನ ಆಯೋಜಿಸಿದೆ. ಮಹದೇವ ಪ್ರಸಾದ್ ಅವರ ವತಿಯಿಂದ ಪ್ರಾಯೋಜಿಸಿದೆ. 30 ದಿನಗಳಲ್ಲಿ 30 ಜಿಲ್ಲೆಗಳಿಗೆ ಮೆಗಾ ರೈಡ್ 3500+ ಕಿಮೀಗಳನ್ನು 4 ಮಹಿಳಾ ರೈಡರ್ಸ್ ಪ್ರವಾಸ ಕೈಗೊಂಡಿದ್ದೇವೆ ಎಂದು ಹೇಳಿದರು.

ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸಲು ನಾವೆಲ್ಲರೂ ಅಭಿಯಾನ ನಡೆಸುತ್ತಿದ್ದು, ಕರ್ನಾಟಕ ಗ್ರಾಮೀಣ ಮಹಿಳೆಯರನ್ನು ಭೇಟಿ ಮಾಡಿ ಮಹಿಳೆಯರ ಸುರಕ್ಷತೆ, ಅವರ ಸಮಸ್ಯೆಗಳು ಮತ್ತು ಆತ್ಮರಕ್ಷಣೆಯ ಪ್ರಾಮುಖ್ಯತೆಯ ಕುರಿತು ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ, ಜಿ.ವಿಜಯ್ ಕುಮಾರ್, ವಸಂತ್ ಹೋಬಳಿದಾರ್, ಚಂದ್ರಶೇಖರ್, ಆನಂದಮೂರ್ತಿ, ಇನ್ನರ್‌ವ್ಹೀಲ್ ಅಧ್ಯಕ್ಷೆ ಜಯಂತಿ ವಾಲಿ ಹಾಗೂ ಕಾರ್ಯದರ್ಶಿ ಬಿಂದು ವಿಜಯ್ ಕುಮಾರ್, ಭಾರತಿ ಚಂದ್ರಶೇಖರ್, ಸುಧಾ ಪ್ರಸಾದ್, ಶಬರಿ ಕಡಿದಾಳ್, ಸುರೇಖಾ ರಾಮಚಂದ್ರ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…