ಶಿವಮೊಗ್ಗ: ಮಾನವ ಜನ್ಮ ಅತ್ಯಂತ ಶ್ರೇಷ್ಟವಾದುದು. ದೇಗುಲ ನಿರ್ಮಾಣ ಮಾಡಬೇಕು ಅಥವಾ ದೇವರ ಬಗ್ಗೆ ಜ್ಞಾನವನ್ನು ಪಡೆಯಬೇಕು ಎಂದು ಹಂಪಿ ಮಾತಂಗ ಪೀಠದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಅವರು ಇಂದು ಬಾಪೂಜಿನಗರದ ಶ್ರೀ ಮಾರಿಕಾಂಬ ಸೇವಾ ಸಮಿತಿ ಹಮ್ಮಿಕೊಂಡಿದ್ದ ಶ್ರೀ ಮಾರಿಕಾಂಬ ದೇವಾಲಯ ಗೋಪುರ ಮತ್ತು ಕಳಶ ಪ್ರತಿಷ್ಠಾಪನೆ ಮತ್ತು ಗರುಡಗಂಭ ಪೂಜೆ ಹಾಗೂ ವಾರ್ಷಿಕ ಮಹೋತ್ಸವದ ಮೊದಲ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.ವಿಶ್ವದಲ್ಲೇ ಭಾರತ ಆಧ್ಯಾತ್ಮ ಗುರುವಾಗಿದೆ. ಬೇರೆ ಬೇರೆ ದೇಶಗಳು ಭೌತಿಕ ಮತ್ತು ಭೋಗ ವಸ್ತುಗಳನ್ನು ನಿರ್ಮಾಣ ಮಾಡುತ್ತವೆ. ಆದರೆ, ಭಾರತದಲ್ಲಿ ಆಧ್ಯಾತ್ಮ, ಅನುಸಂಧಾನ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ಕಲಿಸಿಕೊಡುತ್ತದೆ. ಭಾರತ ಭೂಮಿ ಅವತಾರ ಪುರುಷರ ಭೂಮಿಯಾಗಿದೆ. ಇಲ್ಲಿ ಪಂಚಭೂತಗಳು, ಜೀವಿಗಳು ಮತ್ತು ಪರಿಸರವನ್ನು ದೇವರೆಂದು ಪೂಜಿಸುತ್ತೇವೆ.
ಭಾರತ ಭೂಮಿಯಲ್ಲಿ ಹುಟ್ಟುವುದೇ ಒಂದು ಪುಣ್ಯ. ಆ ಹೊತ್ತಿನ ಸಂತರು, ಶರಣರು ಇಡೀ ಭಾರತವನ್ನು ಅಖಂಡವಾಗಿ ಒಗ್ಗೂಡಿಸಿದರು. ಆದರೆ, ಇವತ್ತಿನ ಜನಾಂಗ ಒಡೆದು ಹಂಚುವ ಮಟ್ಟಕ್ಕೆ ಹೋಗುತ್ತಿದೆ. ಆದರೆ, ಜಾತಿ, ಮತ, ಪಂಥ ಭೇದ ಮರೆತು ಒಗ್ಗೂಡಬೇಕಿದೆ. ಅಸ್ಪೃಶ್ಯರು, ಬಡವರು, ಶ್ರೀಮಂತರು ಎಂಬುದನ್ನು ಮರೆತು ಒಗ್ಗೂಡುವುದೇ ಜಾತ್ರೆಗಳ ವಿಶೇಷತೆ. ಮನದ ಕಲ್ಮಷವನ್ನು ತೊಳೆದು ಭಕ್ತಿ, ಭಜನೆಯಿಂದ ಮಾತೆಯನ್ನು ಪೂಜಿಸಿದರೆ ಎಲ್ಲಾ ತೊಡಕು ನಿವಾರಣೆಯಾಗುತ್ತದೆ. ನಮ್ಮ ದೇಶದ ಸಂಪತ್ತೇ ಗೋವು. 80 ಕೋಟಿಗಳಿದ್ದಷ್ಟು ಗೋವುಗಳ ಸಂಖ್ಯೆ 20 ಕೋಟಿಗೆ ಇಳಿದಿದೆ. 100 ಕ್ಕೂ ಹೆಚ್ಚು ಗೋವುಗಳ ತಳಿಗಳಿದ್ದ ಭಾರತದಲ್ಲಿ 25 ಕ್ಕೆ ಇಳಿದಿದೆ.ಮಾತೆಯ ಪೂಜೆ ಎಷ್ಟು ಮುಖ್ಯವೋ ಗೋಮಾತೆಯ ಸೇವೆಯೂ ಅಷ್ಟೇ ಮುಖ್ಯ. ನಮ್ಮ ದೇಶದ ಇತಿಹಾಸವನ್ನು ಮೆಲುಕು ಹಾಕಿ ಇತಿಹಾಸ ಪುರುಷರನ್ನು ಗೌರವಿಸೋಣ.
ದುಶ್ಚಟಗಳನ್ನು ಬಿಡೋಣ. ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಸತ್ಪ್ರಜೆಗಳನ್ನಾಗಿ ಮಾಡಿ ದೇಶಭಕ್ತರನ್ನಾಗಿ ಬೆಳೆಸೋಣ ಎಂದರು.ಹೆಣ್ಣುಮಕ್ಕಳ ಪಾತ್ರ ಕುಟುಂಬದಲ್ಲಿ ಬಹಳ ಮುಖ್ಯ. ಹಿಂದುಳಿದ ಸಮಾಜಕ್ಕೆ ಅಂಟಿಕೊಂಡ ಶಾಪವನ್ನು ದೂರ ಮಾಡೋಣ. ಬಾಲ್ಯ ವಿವಾಹ ಪದ್ಧತಿಯನ್ನು ಬಿಡಬೇಕು. ಮಕ್ಕಳಲ್ಲಿ ಆಧ್ಯಾತ್ಮ, ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬಿತ್ತಿ ಸತ್ಪ್ರಜೆಗಳನ್ನಾಗಿ ಮಾಡೋಣ ಎಂದರು.ಈ ಸಂದರ್ಭದಲ್ಲಿ ಸೂಡಾ ಅಧ್ಯಕ್ಷ ನಾಗರಾಜ್, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವೈ.ಹೆಚ್. ನಾಗರಾಜ್, ಕಾಂಗ್ರೆಸ್ ಮುಖಂಡ ಡಾ. ಶ್ರೀನಿವಾಸ್ ಕರಿಯಣ್ಣ, ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಸದಸ್ಯೆ ಸುರೇಖಾ ಮುರಳೀಧರ್, ಕೆ.ಇ. ಕಾಂತೇಶ್, ಮಾರಿಕಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಮಾರಪ್ಪ, ಅಧ್ಯಕ್ಷ ಎ. ಮೂರ್ತಿ, ಉಪಾಧ್ಯಕ್ಷ ಎನ್. ರಂಗನಾಥ್, ಎನ್. ಮಣ್ಣೆ ನರಸಿಂಹಯ್ಯ, ಎನ್. ಗೋವಿಂದ್, ಮಾಜಿ ಮೇಯರ್ ಮಂಗಳಾ ಅಣ್ಣಪ್ಪ ಮೊದಲಾದವರಿದ್ದರು.