ಶಿವಮೊಗ್ಗ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಎಲ್ಲಾ ಇಲಾಖೆಗಳಲ್ಲೂ ವ್ಯಾಪಕವಾಗಿ ಹಬ್ಬಿದ್ದು, ನಗರದ ಎಪಿಎಂಸಿ ಕಾಮಗಾರಿಗಳು ಪೂರ್ಣಗೊಳ್ಳುವ ಮುನ್ನವೇ ಟೆಂಡರ್ ಮೊತ್ತಕ್ಕಿಂತ ಹೆಚ್ಚುವರಿ ಬಿಡುಗಡೆ ಮಾಡಿರುವುದು ಭಾರೀ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪಿಸಿದ್ದಾರೆ.
ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ಮುಖ್ಯ ರಸ್ತೆಯ ಎಪಿಎಂಸಿ ಮುಖ್ಯದ್ವಾರದ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಬೆಂಗಳೂರಿನ ನೀಲ್ ಕನ್ ಸ್ಟ್ರಕ್ಷನ್ ಅವರಿಗೆ ಅಂದಾಜು 10 ಕೋಟಿ ರೂ. ಟೆಂಡರ್ ಆಗಿದ್ದು, ಅದೇ ಕಾಮಗಾರಿ ಮುಗಿಯುವ ಮೊದಲೇ ಹೆಚ್ಚುವರಿಯಾಗಿ 2 ಕೋಟಿ ರೂ. ಬಿಡುಗಡೆಯಾಗಿದೆ ಎಂದರು. ಅದೇ ರೀತಿ ಸಣ್ಣ ಮಳಿಗೆಗಳ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ 3.75 ಕೋಟಿ ರೂ. ಇದ್ದು, ಇದಕ್ಕೂ ಕೂಡ 75 ಲಕ್ಷ ರೂ. ಹೆಚ್ಚುವರಿಯಾಗಿ ಬಿಡುಗಡೆಯಾಗಿದೆ. ಬೆಂಗಳೂರಿನ ಲಕ್ಷ್ಮಿ ಸಾಗರ್ ಎಂಬುವವರು ಗುತ್ತಿಗೆದಾರರಾಗಿದ್ದಾರೆ ಎಂದರು.ತೀರ್ಥಹಳ್ಳಿಯ ಯೋಗಿನರಸೀಪುರ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗೋದಾಮುಗಳು, ಕಾಂಕ್ರೀಟ್ ರಸ್ತೆ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗೆ 10 ಕೋಟಿ ರೂ. ಟೆಂಡರ್ ಆಗಿದ್ದು, ಇಲ್ಲೂ ಕೂಡ ಕಾಮಗಾರಿ ಪೂರ್ಣಗೊಳ್ಳದೇ ಹೆಚ್ಚುವರಿಯಾಗಿ 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಈ ಎಲ್ಲಾ ವರ್ಕ್ ಶಿಫ್ ಗಳಿಗೆ ಇಂಜಿನಿಯರ್ ಗಳು, ಕಾರ್ಯದರ್ಶಿಗಳು ಮತ್ತು ಬೆಂಗಳೂರು ಕೇಂದ್ರ ಕಚೇರಿಯ ಎಸ್ಇ ಆಫೀಸ್ ನವರು ಶಾಮೀಲಾಗಿದ್ದು, ನಿವೃತ್ತಿಯ ಅಂಚಿನಲ್ಲಿ ಎಸ್ಇ ಅವರು ತರಾತುರಿಯಲ್ಲಿ ಬಂದು ಅನುಮೋದನೆ ನೀಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಸ್ಥಳದಲ್ಲೇ ಪ್ರತಿಭಟನೆ ನಡೆಸುವುದಲ್ಲದೇ ಎಸಿಬಿಗೆ ದೂರು ನೀಡುವುದಾಗಿ ಅವರು ಎಚ್ಚರಿಸಿದ್ದಾರೆ.ಇದೇ ರೀತಿ ನಿರ್ಮಿತಿ ಕೇಂದ್ರದ ಅಧಿಕಾರಿ ನಾಗರಾಜ್ ಅವರು ಕಳೆದ 15 ವರ್ಷಗಳಿಂದ ಇಲ್ಲೇ ಬೇರು ಬಿಟ್ಟಿದ್ದು ಟೆಂಡರ್ ಇಲ್ಲದೇ ನಡೆಸುವ ನೂರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಸಬ್ ಕಂಟ್ರಾಕ್ಟರ್ ಗಳಿಗೆ ನೀಡಿ ವ್ಯಾಪಕ ಭ್ರಷ್ಟಾಚಾರ ಎಸಗಿದ್ದಾರೆ. ಯಾವುದೇ ಸರ್ಕಾರ ಬರಲಿ, ಈ ವ್ಯಕ್ತಿ ಅದೇ ಜಾಗದಲ್ಲಿ ಇದೇ ಇರುವುದು ವಿಶೇಷ. ನಿರ್ಮಿತಿ ಕೇಂದ್ರದಿಂದ ನಡೆಸಿರುವ ಎಲ್ಲಾ ಕಾಮಗಾರಿಗಳ ಬಗ್ಗೆಯೂ ತನಿಖೆ ನಡೆಸುವಂತೆ ಎಸಿಬಿಗೆ ದೂರು ನೀಡಲಾಗುವುದು ಎಂದರು.
ಆರ್.ಟಿ.ಒ. ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಎಲ್ಲಾ ಕಚೇರಿಗಳಲ್ಲೂ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದರ ಬಗ್ಗೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ಮುಂದುವರೆಸಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸಿ.ಎಸ್. ಚಂದ್ರಭೂಪಾಲ್, ಎಂ. ಚಂದನ್, ಎಸ್.ಸಿ. ಚಂದ್ರಶೇಖರ್, ಇಕ್ಬಾಲ್ ನೇತಾಜಿ ಮೊದಲಾದವರಿದ್ದರು.