ಶಿವಮೊಗ್ಗ: ಇಸ್ಲಾಮಿಕ್ ಆಕ್ರಮಣಕಾರರು ಭಾರತದ 36 ಸಾವಿರ ಹಿಂದೂ ದೇವಾಲಯಗಳನ್ನು ಕೆಡವಿ ಮಸೀದಿ ನಿರ್ಮಿಸಿದ್ದು, ಈ ಮಸೀದಿಗಳನ್ನೆಲ್ಲಾ ತೆರವುಗೊಳಿಸಿ ಅಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸುವುದೇ ಹಿಂದೂ ಸಮಾಜದ ಮುಖ್ಯ ಗುರಿಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಯೋಧ್ಯೆ, ಕಾಶಿ, ಮಥುರಾ ಸೇರಿದಂತೆ ಭಾರತದ ಅನೇಕ ಕ್ಷೇತ್ರಗಳು ಹಿಂದುಗಳ ಪುಣ್ಯಕ್ಷೇತ್ರವಾಗಿದೆ. ಇಂತಹ ಪುಣ್ಯಕ್ಷೇತ್ರಗಳಲ್ಲಿ ಮುಸ್ಲಿಂ ಆಕ್ರಮಣಕಾರರು ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ನಿರ್ಮಿಸಿದ್ದು, ಈಗ ಅಲ್ಲೆಲ್ಲಾ ಹಿಂದೂ ದೇವಾಲಯಗಳು ಇದ್ದವು ಎಂಬುದಕ್ಕೆ ಪುರಾವೆ ಸಿಕ್ಕುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದೆ ಕಾಶಿಯಲ್ಲಿ ದೊರೆತ ಹನ್ನೆರಡು ಅಡಿ ಎತ್ತರದ ಶಿವಲಿಂಗವೇ ಸಾಕ್ಷಿಯಾಗಿದೆ ಎಂದರು.
ಸುಮಾರು 350 ವರ್ಷಗಳ ಹಿಂದೆ ಔರಂಗಜೇಬ ಎಂಬಾತ ಕಾಶಿವಿಶ್ವನಾಥ ದೇವಸ್ಥಾನವನ್ನು ಧ್ವಂಸ ಮಾಡಿದ್ದನು. ಇದಾದ ನಂತರ 110 ವರ್ಷಗಳ ನಂತರ ಮಹಾರಾಣಿ ಅಹಲ್ಯಬಾಯಿ ಹೋಳ್ಕರ್‍ರವರು ದೇವಾಲಯವನ್ನು ಮರು ನಿರ್ಮಾಣ ಮಾಡಿದರು. ಔರಂಗಜೇಬನ ಸಂತತಿಯಲ್ಲಿ ನಾವು ಇರುವುದಿಲ್ಲ. ಅಹಲ್ಯಬಾಯಿಯವರ ಸಂತತಿ ಜೊತೆ ಇರುತ್ತೇವೆ ಎಂದು ಪಕ್ಷಬೇಧ ಮರೆತು ಹೇಳುತ್ತಿದ್ದಾರೆ. ಆದರೆ, ಕೆಲವು ಕಾಂಗ್ರೆಸ್ಸಿಗರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ರಾಷ್ಟ್ರದ್ರೋಹವಲ್ಲದೇ ಮತ್ತೇನೂ ಅಲ್ಲ ಎಂದರು.

ವಿವಾದಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಮೇ 17ರ ಒಳಗೆ ಮಸೀದಿ ಎಂದು ಕರೆಯಲ್ಪಡುವ ಆ ಜಾಗವನ್ನು ಸರ್ವೇ ಮಾಡಿ ವರದಿ ನೀಡಲು ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಸರ್ವೇ ಮಾಡಲಾಗಿದೆ. ಅಲ್ಲಿ 12 ಅಡಿ ಎತ್ತರದ ಶಿವಲಿಂಗ ಇದ್ದದ್ದು ಕಂಡುಬಂದಿದೆ. ಸುಮಾರು 350 ವರ್ಷಗಳ ಕಾಲ ಬಾವಿಯಲ್ಲಿ ಈಶ್ವರನ ಲಿಂಗವನ್ನು ಹಾಕಿದ್ದಾರೆ. ಮುಸ್ಲಿಮರು ಅದೇ ನೀರಿನಿಂದ ಪಾದ ತೊಳೆದುಕೊಂಡು ಮಸೀದಿ ಒಳಗೆ ಹೋಗುತ್ತಿದ್ದಾರೆ. ಇದನ್ನು ಕೇಳಿದಾಗ ಹಿಂದೂಗಳಿಗೆ ಕಣ್ಣೀರಿನ ಜೊತೆಗೆ ಆಕ್ರೋಶವೂ ಬರುತ್ತದೆ. ಸರ್ವೇ ಕಾರ್ಯವನ್ನೇ ಕೆಲವು ಕಾಂಗ್ರೆಸ್ ಮುಖಂಡರು ವಿರೋಧಿಸಿರುವುದನ್ನು ನೋಡಿದರೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ. ಮಸೀದಿಯನ್ನು ಕೆಡವಿ ಅಲ್ಲಿ ಈಶ್ವರನ ದೇವಾಲಯ ಸ್ಥಾಪಿಸಿದ್ದರೆ ಸುಮ್ಮನಿರುತ್ತಿದ್ದರೆ? ಹುಬ್ಬಳ್ಳಿಯಲ್ಲಿ ಒಂದು ಚಿತ್ರ ಮಸೀದಿಯಲ್ಲಿ ಕಂಡಾಗ ದಂಗೆ ಏಳುತ್ತಾರೆ. ಹಿಂದೂಗಳು ನೂರಾರು ವರ್ಷಗಳಿಂದ ಇಂತಹ ಅನ್ಯಾಯವನ್ನು ತಾಳ್ಮೆಯಿಂದ ಸಹಿಸಿಕೊಂಡು ಬಂದಿದ್ದಾರೆ ಎಂದರು.
ಅಲ್ಲಿ ಮಸೀದಿಯ ಎದುರಿಗೆ ನಂದಿ ಇದೆ. ಆ ನಂದಿ ಮಸೀದಿಯನ್ನೇ ನೋಡುತ್ತಿದೆ. ಇದರ ಅರ್ಥ ಮಸೀದಿ ಒಳಗಿರುವ ಶಿವಲಿಂಗವನ್ನು ನೋಡುತ್ತಿದೆ ಎಂದೇ ಗ್ರಹಿಸಬಹುದು. ಅಲ್ಲದೆ, ಅಲ್ಲಿ ಶೃಂಗಾರಗೌರಿ, ನಂದಿ, ಗಣೇಶ, ಆಂಜನೇಯನ ವಿಗ್ರಹಗಳೂ ಇದ್ದವು ಎನ್ನುವುದಕ್ಕೆ ಸಾಕ್ಷಿ ಇದೆ. ಇದೆಲ್ಲವನ್ನೂ ನೋಡಿದರೆ ಮುಸ್ಲಿಮರ ಆಕ್ರಮಣ ಸಹಜವಾಗಿಯೇ ಓವೈಸಿ ಎನ್ನುವವರು ಔರಂಗಜೇಬನ ಸಮಾಧಿಗೆ ನಮಸ್ಕರಿಸಿದ್ದಾರೆ. ಇದು ದೇಶದ್ರೋಹವಲ್ಲದೇ ಮತ್ತೇನು ಎಂದು ಪ್ರಶ್ನೆ ಮಾಡಿದರು.

ಪವಿತ್ರ ಹಿಂದೂ ಕ್ಷೇತ್ರಗಳ ಉಳಿಸಿಕೊಳ್ಳುವ ಕಾಲ ಬಂದಿದೆ. ಭಾರತದ 36 ಸಾವಿರ ದೇವಾಲಯಗಳನ್ನು ಮತ್ತೆ ಕಟ್ಟುವ ಕೆಲಸ ಹಿಂದೂ ಸಮಾಜದ್ದು. ಕಾನೂನುಬದ್ಧವಾಗಿಯೇ ನಾವು ಇವುಗಳನ್ನು ಪಡೆಯುತ್ತೇವೆ. ಈಗಾಗಲೇ ಅಯೋಧ್ಯೆಯ ಚಿತ್ರಣ ಎಲ್ಲರಿಗೂ ಗೊತ್ತಿದೆ. ಅಲ್ಲಿ ಬಾಬರಿ ಮಸೀದಿ ಕೆಡವಿ ಶ್ರೀರಾಮ ದೇವಾಲಯವನ್ನು ಕಟ್ಟಿದ್ದೇವೆ. ಅದೇ ರೀತಿ ಕಾಶಿ, ಮಥುರಾದಲ್ಲೂ ಕೂಡ ಮಸೀದಿಗಳನ್ನ ತೆರವುಗೊಳಿಸಿ ಹಿಂದೂ ದೇವಾಲಯಗಳನ್ನು ಕಟ್ಟೇ ಕಟ್ಟುತ್ತೇವೆ. ಹಿಂದೂ ಸಮಾಜ ಇನ್ನೂ ಸುಮ್ಮನಿರುವುದಿಲ್ಲ. ಓವೈಸಿಯಂತಹ ರಾಷ್ಟ್ರದ್ರೋಹಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಕರ್ನಾಟಕದಲ್ಲೂ ಕೂಡ ಎಲ್ಲೆಲ್ಲಿ ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿದ್ದಾರೋ ಅಲ್ಲಲ್ಲಿ ಮತ್ತೆ ದೇವಾಲುಯಗಳನ್ನು ನಿರ್ಮಾಣ ಮಾಡುತ್ತೇವೆ ಎಂದರು.

ಹಿಂದೂಗಳ ಪುಣ್ಯಕ್ಷೇತ್ರಗಳ ಸುದ್ದಿಗೆ ಯಾರೂ ಬರಬಾರದು. ಹಿಂದೂಗಳು ಮೆಕ್ಕಾ ಮದೀನದ ಸುದ್ದಿಗೆ ಏನಾದರೂ ಹೋಗುತ್ತಾರೆಯೇ? ಕ್ರಿಶ್ಚಿಯನ್ನರ ಪುಣ್ಯಕ್ಷೇತ್ರಗಳೂ ಇಲ್ಲಿವೆ. ಹಾಗಾಗಿ ಅವರವರ ಧರ್ಮಗಳ ಕ್ಷೇತ್ರಗಳನ್ನು ಅವರು ಕಾಪಾಡಿಕೊಳ್ಳುತ್ತಾರೆ. ಹಿಂದೂಗಳೂ ಅಷ್ಟೆ. ಈಗ ನಮಗಾಗಿರುವ ಅನ್ಯಾಯವನ್ನು ಸರಿಪಡಿಸುವುದು ನಮ್ಮ ಕರ್ತವ್ಯವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ಜೆ. ನಾಗರಾಜ್, ಕೆ. ಗಿರೀಶ್ ಪಟೇಲ್, ಎಸ್. ದತ್ತಾತ್ರಿ, ಶಿವರಾಜ್, ಎಸ್.ಎನ್. ಚನ್ನಬಸಪ್ಪ, ಎಸ್. ಜ್ಞಾನೇಶ್ವರ್, ವಿನ್ಸೆಂಟ್ ರೋಡ್ರಿಗಸ್, ಕೆ.ವಿ. ಅಣ್ಣಪ್ಪ ಮುಂತಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…