ಶಿವಮೊಗ್ಗ: ನ್ಯೂ ಮಂಡ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದುರಸ್ತಿ ಪಡಿಸಬೇಕು ಎಂದು ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ನ್ಯೂ ಮಂಡ್ಲಿ ನಾಗರಿಕರ ಹಿತರಕ್ಷಣ ಸಮಿತಿ ಇಂದು ಶಾಲಾ ಮಕ್ಕಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನ್ಯೂ ಮಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದು ಹೋಗಿದೆ. ಮಳೆ ಬಂದು ನೀರು ನಿಂತುಹೋಗಿದೆ. ಮಕ್ಕಳು ಅಲ್ಲಿ ಕೂರಲೂ ಆಗುವುದಿಲ್ಲ. ಮಳೆಗಾಲ ಇನ್ನು ಆರಂಭವಾಗುತ್ತಿದೆ. ಹೀಗಾದರೆ ಗತಿಯೇನು? ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಸುಮ್ಮನಿದೆ ಎಂದು ದೂರಿದರು.
ಈ ಹಿಂದೆ ಮಳೆ ಬಿದ್ದಾಗ ಶಾಲೆಯ ಆವರಣದಲ್ಲಿ ನೀರು ತುಂಬಿಕೊಂಡಿತ್ತು. ಆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದಾಗ ಬಿಇಓ, ಡಿಡಿಪಿಐ ಆಗಮಿಸಿ ಕೂಡಲೇ ಹೊಸ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಆದರೆ, ಈ ವರೆಗೂ ಶಾಲೆಯ ದುರಸ್ತಿ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೆ ನಿನ್ನೆ ಬಿದ್ದ ಮಳೆಗೆ ಶಾಲಾ ಕಟ್ಟಡ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿದ್ದು, ಶಾಲೆಯ ಬಾಡಿಗೆಯನ್ನು ಸಹ ಕೊಟ್ಟಿರುವುದಿಲ್ಲ.

ಇದೀಗ ಕಟ್ಟಡದ ಮಾಲೀಕರು ಬಾಡಿಗೆಗೆ ಒತ್ತಾಯಿಸುತ್ತಿದ್ದಾರೆ. ಕೂಡಲೇ ಶಾಲಾ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಆರಂಭವಾಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಆಗ್ರಹಿಸಿದರು.
ಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ 163 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರು, ಶಾಲಾ ಮಕ್ಕಳು, ಸಾರ್ವಜನಿಕರು ಪಾಲ್ಗೊಂಡಿದ್ದರು..

ವರದಿ ಮಂಜುನಾಥ್ ಶೆಟ್ಟಿ…