ಶಿವಮೊಗ್ಗ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಂತಹ ಪ್ರಕರಣಗಳು ಕಾಂಗ್ರೆಸ್ ಕಾಲದಲ್ಲಿಯೇ ಹೆಚ್ಚಾಗಿ ನಡೆದಿದೆ. ಈ ಬಾರಿ ಕೂಡ ಕಾಂಗ್ರೆಸ್ ಮುಖಂಡರ ಕೈವಾಡವೇ ಇದೆ. ತನಿಖೆ ನಂತರ ಇದೆಲ್ಲವೂ ಹೊರಬರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಸಿಐಡಿ ವಿಶೇಷ ತನಿಖೆ ನಡೆಸುತ್ತಿದ್ದು, ಈಗಾಗಲೇ ಕಲಬುರಗಿಯಲ್ಲಿ 1 ಕೋಟಿ ರೂ., ಬೆಂಗಳೂರಿನಲ್ಲಿ 2.19 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಕೋನಗಳಲ್ಲಿಯೂ ತನಿಖೆ ಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ತಾತ್ವಿಕ ಅಂತ್ಯ ನೀಡಲಾಗುವುದು. ವಿಶೇಷ ನ್ಯಾಯಾಲಯದ ಬಗ್ಗೆಯೂ ಚೀಂತಿಸಲಾಗುತ್ತಿದೆ ಎಂದರು.ಕಾಂಗ್ರೆಸ್ ಗೃಹಮಂತ್ರಿಗಳ ವೈಫಲ್ಯವೆಂದು ಆರೋಪಿಸುತ್ತಿರುವ ಬಗ್ಗೆ ಉತ್ತರ ನೀಡಿದ ಅವರು, ಕಾಂಗ್ರೆಸ್ ಕಾಲದಲ್ಲಿಯೇ ಇಂತಹ ಘಟನೆಗಳು ಹೆಚ್ಚಾಗಿ ನಡೆದಿವೆ. ಘಟನೆ ಗಮನಕ್ಕೆ ಬಂದ ತಕ್ಷಣವೇ ನಾನು ಇದನ್ನು ತನಿಖೆಗೆ ಒಳಪಡಿಸಿದ್ದೇನೆ.
ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ. ಕಷ್ಟಪಟ್ಟು ವ್ಯಾಸಂಗ ಮಾಡಿದವರಿಗೆ ಅನ್ಯಾವಾಗಬಾರದು ಎಂದೇ ಈ ಕ್ರಮ ಕೈಗೊಳ್ಳಲಾಗಿದೆ. ಮರು ಪರೀಕ್ಷೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮುಂದೆ ತಿಳಿಸಲಾಗುವುದು ಎಂದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿರುವುದರಲ್ಲಿ ವಿಶೇಷವೇನಿಲ್ಲ. ಅವರು ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಹೋಗಿಲ್ಲ. ಸರ್ಕಾರಿ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದಾರೆ. ಹಿಂದೆಯೂ ಅವರು ದೆಹಲಿಗೆ ಸಂಪುಟ ವಿಸ್ತರಣೆಗಾಗಿ ದೆಹಲಿಗೆ ಹೋಗಿರಲಿಲ್ಲ ಎಂದರು.