ಶಿವಮೊಗ್ಗ: ತುಂಗಾ ನಗರದಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಲಭ್ಯ ಒದಗಿಸಿ ಮಕ್ಕಳು ವಿದ್ಯಾಭ್ಯಾಸ ಪಡೆಯಲು ಅನುಕೂಲ ಮಾಡಿಕೊಡಬೇಕೆಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಇಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.
ಮೇ 19 ರಂದು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವಿವಿಧ ಪ್ರದೇಶಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ. ಶಾಲೆಯ ಆರ್.ಸಿ.ಸಿ. ಮೇಲ್ಛಾವಣಿ ಬಿರುಕುಗೊಂಡಿದ್ದು, ಮಳೆ ಸಂದರ್ಭದಲ್ಲಿ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಗೋಡೆಗಳು ನಿಂತ ನೀರಿನಿಂದಾಗಿ ಶಿಥಿಲಗೊಂಡಿವೆ. ಮಕ್ಕಳಿಗೆ ಕೂರಲು ಬೆಂಚ್, ಮೇಜುಗಳಿಲ್ಲದೇ ನೆಲದ ಮೇಲೆ ಕುಳಿತುಕೊಂಡು ಪಾಠ, ಪ್ರವಚನ ಕೇಳಲು ಅಡಚಣೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಶಿಥಿಲಗೊಂಡ ನೆಲದಿಂದ ಮಕ್ಕಳ ಆರೋಗ್ಯ ಹಾಳಾಗುತ್ತಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವ ಪೀಠೋಪಕರಣಗಳ ಅವಶ್ಯಕತೆ ಇದೆ. ಶಿಥಿಲಗೊಂಡಿರುವ ಆರ್.ಸಿ.ಸಿ., ಕಾಂಪೌಂಡ್, ಗೋಡೆ ದುರಸ್ತಿ ಮಾಡಿಸಿಕೊಡಬೇಕೆಂದು ಒತ್ತಾಯಿಸಿದರು.
ಮಕ್ಕಳ ಹಿತದೃಷ್ಠಿಯಿಂದ ಆಧುನಿಕ ವಿದ್ಯಾಭ್ಯಾಸಕ್ಕಾಗಿ, ಸುರಕ್ಷತೆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮೂಲ ಸೌಲಭ್ಯ ಒದಗಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸೈಯದ್ ಫರ್ವೀಜ್, ಅಬ್ದುಲ್ ರಫೀಕ್, ಮೊಹಮ್ಮದ್ ಹಬೀಬ್, ರಿಯಾಜ್ ಇನ್ನಿತರರು ಇದ್ದರು.