ಶಿವಮೊಗ್ಗ: ಸ್ಮಾರ್ಟ್‍ಸಿಟಿ ಅವೈಜ್ಞಾನಿಕ ಕಾಮಗಾರಿಗಳನ್ನು ವಿರೋಧಿಸಿ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಖಂಡಿಸಿ ತನಿಖೆಗೆ ಆಗ್ರಹಿಸಿ ಇಂದು ಬೆಳಿಗ್ಗೆ ಕುವೆಂಪು ರಸ್ತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಕಾರ್ಯಕರ್ತರು ಕಾಮಗಾರಿಯಲ್ಲಿ ನಡೆದ ಅವ್ಯವಹಾರವನ್ನು ತೀವ್ರವಾಗಿ ಖಂಡಿಸಿದರು. ಲೂಟಿ ಹೊಡೆಯಲಾಗಿದೆ. ಶೇ.40ರಷ್ಟು ಕಮಿಷನ್ ಪಡೆಯಲಾಗಿದೆ. ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಸ್ಮಾರ್ಟ್ ಕಾಮಗಾರಿಗಳು ಅವೈಜ್ಞಾನಿಕವಾಗಿವೆ. ಪಾಲಿಕೆಯಾಗಲಿ, ಜಿಲ್ಲಾಡಳಿತವಾಗಲಿ ಕಾಮಗಾರಿ ನಡೆಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ ಎಂದು ಘೋಷಣೆಗಳೊಂದಿಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಸ್ಮಾರ್ಟ್‍ಸಿಟಿಯ ಅವೈಜ್ಞಾನಿಕ ಕಾಮಗಾರಿಗಳಿಂದ ಇಡೀ ನಗರವೇ ಹಾಳಾಗಿದೆ. ಕಳೆದ ಒಂದೆರಡು ದಿನದಲ್ಲಿ ಬಿದ್ದ ಭಾರೀ ಮಳೆಯಿಂದ ಬಡವರ ಬದುಕು ಮೂರಾಬಟ್ಟೆಯಾಗಿದೆ. ರಾಜಕಾಲುವೆಗಳು ಹೂಳು ತುಂಬಿಕೊಂಡಿದ್ದು, ನೀರು ತಗ್ಗಿನ ಪ್ರದೇಶದ ಮನೆಗಳಿಗೆ ನುಗ್ಗಿದೆ. ಚರಂಡಿಗೆ ನೀರು ಸರಾಗವಾಗಿ ಸೇರದೇ ರಸ್ತೆಯಲ್ಲಿ ನೀರು ಹರಿದಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರುಪಾಲಾಗಿವೆ. ಇದಕ್ಕೆಲ್ಲಾ ಸ್ಮಾರ್ಟ್‍ಸಿಟಿ ಅವೈಜ್ಞಾನಿಕ ಹಾಗೂ ಅವ್ಯವಹಾರದ ಕಾಮಗಾರಿಗಳೇ ಕಾರಣವಾಗಿದೆ. ಅಧಿಕಾರಿಗಳು ಮತ್ತು ಆಡಳಿತ ಪಕ್ಷದವರು ಸೇರಿಕೊಂಡು ಭಾರೀ ಲೂಟಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯೆ ರೇಖಾ ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಗಿರೀಶ್ ಸೇರಿದಂತೆ ಹಲವರು ಸ್ಮಾರ್ಟ್‍ಸಿಟಿ ಕಾಮಗಾರಿಯಲ್ಲಿ ಆಗಿರುವ ಲೋಪಗಳನ್ನು, ಅವ್ಯವಹಾರಗಳನ್ನು ಖಂಡಿಸಿದರಲ್ಲದೇ ತನಿಖೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಎಲ್. ರಾಮೇಗೌಡ, ಕೆ. ರಂಗನಾಥ್, ಕೆ. ದೇವೇಂದ್ರಪ್ಪ, ಶಿವಾನಂದ್, ವಾಹಿದ್ ಅಡ್ಡು, ಕೆ. ಚೇತನ್, ಎಸ್.ಪಿ. ಶೇಷಾದ್ರಿ, ಸತೀಶ್, ಚಂದನ್, ಶ್ರೀಧರ್, ಎನ್.ಡಿ. ಪ್ರವೀಣ್, ವಿಜಯಲಕ್ಷ್ಮೀ ಪಾಟೀಲ್, ಮೆಹರಿಕ್ ಶರೀಫ್, ಸುವರ್ಣ ನಾಗರಾಜ್, ಸ್ಟೆಲ್ಲಾ ಮಾರ್ಟೀನ್, ವಿಜಯಕುಮಾರ್, ರಾಕೇಶ್, ಎಸ್. ಕುಮರೇಶ್, ಪ್ರಜ್ವಲ್, ಚಂದ್ರಶೇಖರ್ ಎಸ್.ಟಿ., ಅಫ್ರೀದಿ, ವಿನಾಯಕ ಮೂರ್ತಿ, ಬಿ. ಹಾಲಪ್ಪ ಸೇರಿದಂತೆ ಜಿಲ್ಲಾ ಕಾಂಗ್ರೆಸ್‍ನ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ…