ಶಿವಮೊಗ್ಗ: ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಏಕಾಏಕಿ ಒಕ್ಕಲೆಬ್ಬಿಸುತ್ತಿರುವುದನ್ನು ವಿರೋಧಿಸಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಣಘದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಅಸ್ಸಾಂ ರಾಜ್ಯದ ಗೌಹಾಟಿಯ ಸಿಕ್ಸ್ ಮೈಲ್ ನ 150 ಬೀದಿ ಬದಿ ವ್ಯಾಪಾರಿಗಳನ್ನು ಮೇ 11 ರಂದು ಹೊರ ಹಾಕಿ ಬುಲ್ಡೋಜರ್ ಗಳನ್ನು ತಂದು ಗಾಡಿಗಳನ್ನು ನೆಲಸಮ ಮಾಡಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಕಾಶ್ಮೀರ, ಉತ್ತರಾಖಂಡ್, ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಈರಿತೀಯ ಘಟನೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಹಳಷ್ಟು ಜನರು ವಿದ್ಯಾವಂತರು, ಪದವಿ ಪಡೆದು ನಿರುದ್ಯೋಗಿಗಳಾಗಿದ್ದು, ಉದ್ಯೋಗವಿಲ್ಲದೇ, ಬೀದಿ ಬದಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ. ಹಾಗೂ ಓದು ಬರಹ ಬರದವರು ಸಹ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದು, ಅವರಿಗೆ ಎನ್.ಜಿ.ಒ.ಗಳ ಮೂಲಕ ವ್ಯಾಪಾರ ಮಾಡುವ ಸ್ಥಳಗಳಿಗೆ ಹೋಗಿ ಜಿಪಿಎಸ್ ನೊಂದಿಗೆ ಸಮೀಕ್ಷೆ ಮಾಡಿ, ಆಪ್ ಮೂಲಕ ಎಲ್ಲಾ ಸ್ಥಳೀಯ ದಾಖಲೆ ಪರಿಶೀಲನೆ ಮಾಡಿ ಬಾರ್ ಕೋಡ್ ನೊಂದಿಗೆ ಡಿಜಿಟಲ್ ಕಾರ್ಡ್ ಟಿವಿಸಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿ ತಿಂಗಳು ಬೀದಿ ಬದಿ ವ್ಯಾಪಾರಿಗಳ ಕುಂದು ಕೊರತೆಗಳ ಬಗ್ಗೆ ಸಿವಿಸಿ ಸದಸ್ಯರ ಸಮಿತಿ ಸಭೆ ನಡೆಸಬೇಕು. ಆ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಪ್ಪದೇ ಭಾಗವಹಿಸಲು ಆದೇಶಿಸಬೇಕು. ಸಮಿತಿಯ ಸಭೆಗೆ ಹಾಜರಾದ ಸದಸ್ಯರಿಗೆ ಗೌರವಧನ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ಮಣಿಗೌಡರ್, ಎಂ.ಪಿ. ರವಿ. ಅಲ್ಲಾಭಕ್ಷಿ, ರಂಗಮ್ಮ, ಹನುಮಂತಪ್ಪ, ಮೊಹಮ್ಮದ್ ಜಿಲಾನಿ, ಬಾಬು, ಕೇಶಯ್ಯ ಮೊದಲಾದವರಿದ್ದರು.