ಶಂಕರಘಟ್ಟ, ಮೇ. 25: ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಯುವ ಸಮುದಾಯದಲ್ಲಿ ಜ್ಞಾನ, ಕೌಶಲ್ಯಗಳು ಹಾಗೂ ಇಂದಿನ ಸ್ಪರ್ಧಾತ್ಮಕ ಉದ್ಯಮದ ಚಿಂತನೆಗಳನ್ನು ಉದ್ದೀಪಿಸಿ ಉದ್ಯೋಗ ಜಗತ್ತಿಗೆ ನೀಡುವ ಗುರಿಯನ್ನು ಇರಿಸಿಕೊಂಡು ಕುವೆಂಪು ವಿವಿಯು ಹೊಸಹೊಸ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಹೊಸ ಸಿಂಡಿಕೇಟ್ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಹರಿಹರದ ಕಿರ್ಲೊಸ್ಕರ್ ನಿರ್ವಹಣಾ ವಿಜ್ಞಾನ ಸಂಸ್ಥೆ ಮತ್ತು ಕುವೆಂಪು ವಿಶ್ವವಿದ್ಯಾಲಯದ ನಿರ್ವಹಣಾ ವಿಜ್ಞಾನ ವಿಭಾಗಗಳು ಮಾಡಿಕೊಂಡ ದ್ವಿಸದಸ್ಯ ಶೈಕ್ಷಣಿಕ- ಸಂಶೋಧನಾ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಒಪ್ಪಂದವು ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಸಾಮರ್ಥ್ಯ ವೃದ್ಧಿ, ಬಹುಶಿಸ್ತೀಯ ಶಿಕ್ಷಣ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಸಾಂಸ್ಕೃತಿಕ, ಸಾಹಿತ್ಯಿಕ ಶ್ರೀಮಂತಿಕೆಯುಳ್ಳ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ವಿನೂತನ ಕಲಿಕೆ ಮತ್ತು ಸಂಶೋಧನಾ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

ಹರಿಹರದ ಕಿರ್ಲೊಸ್ಕರ್ ನಿರ್ವಹಣಾ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಹೇಶ್ ರೇವಣ್‌ಕರ್ ಮಾತನಾಡಿ, ಎರಡೂ ಸಂಸ್ಥೆಗಳ ಮಟ್ಟದಲ್ಲಿ ವಿದ್ಯಾರ್ಥಿ-ಶಿಕ್ಷಕರ ಪರಸ್ಪರ ವಿನಿಮಯ, ಸಂಶೋಧನಾ ಚಟುವಟಿಕೆಗಳಲ್ಲಿನ ಸಹಕಾರ, ಉಭಯ ಸಂಸ್ಥೆಗಳಿಂದ ವಿಶೇಷ-ವಿಷಯಗಳ ಮೇಲೆ ಪದವಿಗಳ ಆರಂಭ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕುವೆಂಪು ವಿವಿ ಮತ್ತು ಕಿರ್ಲೋಸ್ಕರ್ ಸಂಸ್ಥೆಗಳು ನಿರ್ಧರಿಸಿವೆ. ನಮ್ಮ ಸಂಸ್ಥೆಗಳ ನಡುವಿನ ಈ ಶೈಕ್ಷಣಿಕ ಸಂಶೋಧನಾ ಒಪ್ಪಂದ ಈ ನಿಟ್ಟಿನಲ್ಲಿ ಒಂದು ಆರಂಭ ಮಾತ್ರವಾಗಿದ್ದು, ಪ್ರತಿಭಾನ್ವಿತ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಸುವ ಕಡೆಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ., ಕಿರ್ಲೊಸ್ಕರ್ ಸಂಸ್ಥೆಯ ನಿರ್ವಹಣಾ ವಿಭಾಗದ ಡೀನ್ ಡಾ. ನಾಗರಾಜ್ ಬೇವಿನಮರದ್, ವಿವಿಯ ನಿರ್ವಹಣಾ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಹೆಚ್. ಎನ್., ಡಾ. ಯೋಗಿಶ್ ನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.