ಶಿವಮೊಗ್ಗ: ಪ್ರತಿ ಶಾಲೆಗಳಲ್ಲೂ ವಿದ್ಯಾರ್ಥಿನಿಯರಿಗಾಗಿಯೇ ಹದಿಹರೆಯದ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಿಮ್ಸ್ ಕಾಲೇಜಿನ ಮಹಿಳಾ ಮತ್ತು ಮಕ್ಕಳ ತಜ್ಞೆ ಡಾ. ಸವಿತಾ ಹೇಳಿದರು.

ಅವರು ಇಂದು ಕಲ್ಲಹಳ್ಳಿಯಲ್ಲಿರುವ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯರಿಗಾಗಿ ಮತ್ತು ಅವರ ತಾಯಂದಿರಿಗಾಗಿ ಆಯೋಜಿಸಿದ್ದ ‘ಆರೋಗ್ಯ ಅರಿವು – ಆಪ್ತ ಸಮಾಲೋಚನೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಆರೋಗ್ಯದ ಬಗ್ಗೆ ಇಂದು ಅರಿವು ಬಹಳ ಅಗತ್ಯವಿದೆ. ಹದಿಹರೆಯದ ಆರೋಗ್ಯದ ಬಗ್ಗೆ ಅನೇಕ ಗೊಂದಲಗಳು ಇವೆ. ಮುಕ್ತವಾಗಿ ಮಾತನಾಡಲು ಮಕ್ಕಳಿಗೆ ಸಂಕೋಚವಾಗುತ್ತದೆ. ಎಷ್ಟೋ ಬಾರಿ ತಾಯಂದಿರ ಹತ್ತಿರವೂ ಹೇಳಲಾಗದ ಸಮಸ್ಯೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ತಾಯಂದಿರು ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ. ಪ್ರತಿ ಶಾಲೆಗಳಲ್ಲಿ ಪಠ್ಯದ ಜೊತೆಗೆ ಈ ರೀತಿಯ ಆರೋಗ್ಯ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಸ್ವಚ್ಛತೆಯ ಬಗ್ಗೆ ಅರಿವಿನ ಜೊತೆಗೆ ತಮ್ಮ ಪೋಷಕರೊಂದಿಗೆ ಮುಕ್ತವಾಗಿ ಮಾತನಾಡುವುದನ್ನು ಮಕ್ಕಳು ಕಲಿಯುತ್ತಾರೆ ಎಂದರು.

ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಋತು ಸಮಸ್ಯೆಗಳ ಶಿಕ್ಷಕಿಯರು ಕೂಡ ಪಾಠದ ಜೊತೆಗೆ ಗಮನಿಸಬೇಕಾಗುತ್ತದೆ. ಮಕ್ಕಳ ಮನಸ್ಸಿನಲ್ಲಿ ಆಗುವ ಬದಲಾವಣೆಗಳ ಬಗ್ಗೆ ನಿಗಾ ವಹಿಸಿ, ಸೂಕ್ತ ಆಪ್ತ ಸಮಾಲೋಚನೆಯ ಮೂಲಕ ಅವರಿಗೆ ತಿಳುವಳಿಕೆ ಮೂಡಿಸಬೇಕಾಗುತ್ತದೆ. ಇಂತಹ ಕಾರ್ಯಕ್ರಮಗಳು ಕೇವಲ ವಿದ್ಯಾರ್ಥಿನಿಯರಿಗಲ್ಲದೇ ಅವರ ತಾಯಂದಿರಿಗೂ ಕೂಡ ಸಾಕಷ್ಟು ಮಾಹಿತಿ ಸಿಕ್ಕು ತಮ್ಮ ಮಕ್ಕಳ ಆರೋಗ್ಯ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುವಂತಾಗುತ್ತದೆ ಎಂದರು.
ಆರೋಗ್ಯವೇ ಭಾಗ್ಯವಾಗಿದೆ. ಆರೋಗ್ಯವಂತ ಸಮಾಜದಿಂದ ದೇಶವನ್ನು ಕಟ್ಟಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರಿಯದರ್ಶಿನಿ ಶಾಲೆಯ ಈ ಅರಿವು ಕಾರ್ಯಕ್ರಮ ತುಂಬಾ ಮೌಲ್ಯಯುತವಾದುದು ಮತ್ತು ಮಾದರಿಯಾದುದು. ಮುಂದಿನ ದಿನಗಳಲ್ಲಿ ಸರ್ಕಾರವೇ ಇಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಆರಂಭಿಸಬೇಕು. ಪ್ರತಿ ಶಾಲೆಯಲ್ಲೂ ಉತ್ತಮ ಶೌಚಾಲಯಗಳನ್ನು ನಿರ್ಮಿಸಬೇಕು. ಪಾಠದ ಜೊತೆಗೆ ಆರೋಗ್ಯದ ಅರಿವು ಮೂಡಿಸಬೇಕು ಎಂದರು.

ಪ್ರಾಂಶುಪಾಲೆ ಸುನಿತಾದೇವಿ ಮಾತನಾಡಿ, ಇಂದು ಐದನೇ ತರಗತಿಗೆಯೇ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದಾರೆ. ಇದಕ್ಕೆ ಆಹಾರ ಮತ್ತು ಜೀವನ ಕ್ರಮಗಳೇ ಕಾರಣವಾಗಿದೆ. ಹದಿಹರೆಯದಲ್ಲಿ ಹೆಣ್ಣುಮಕ್ಕಳಿಗೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ದೈಹಿಕ ಬದಲಾವಣೆಯ ಜೊತೆಗೆ ಮಾನಸಿಕ ಬದಲಾವಣೆಯೂ ಆಗುತ್ತದೆ. ಈ ಎಲ್ಲ ಹಂತಗಳಲ್ಲಿಯೂ ಪೋಷಕರು, ಶಿಕ್ಷಕರು ಜಾಗ್ರತೆ ವಹಿಸಬೇಕು. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಇಂದು ಕಷ್ಟವಾಗುತ್ತಿದೆ. ಶಾಲೆಗಳಲ್ಲಿ ಕೇವಲ ಅಂಕಗಳು ಮಾತ್ರ ಮುಖ್ಯವಲ್ಲ. ಮಕ್ಕಳ ಆರೋಗ್ಯದ ಕಡೆಯೂ ಗಮನ ಹರಿಸಬೇಕು. ಅದರಲ್ಲೂ ವಿದ್ಯಾರ್ಥಿನಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಶಿಕ್ಷಣ ಸಂಸ್ಥೆಗಳ ಕೆಲಸವಾಗಿದೆ. ನಮ್ಮ ಶಾಲೆಯಲ್ಲಿ ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಇನ್ನುಮುಂದೆಯೂ ನೀಡುತ್ತೇವೆ.ಇಂದು ವಿದ್ಯಾರ್ಥಿನಿಯರ ಜೊತೆಗೆ ಅವರ ತಾಯಂದಿರೂ ಬಂದಿರುವುದೇ ಆರೋಗ್ಯದ ಬಗೆಗೆ ಇರುವ ಕಾಳಜಿ ತಿಳಿಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಸವಿತಾ ಅವರು ಮಕ್ಕಳ ಮತ್ತು ಅವರ ತಾಯಂದಿರ ಹಲವು ಸಮಸ್ಯೆಗಳಿಗೆ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಉಪಪ್ರಾಂಶುಪಾಲ ಪ್ರವೀಣ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…