ಶಿವಮೊಗ್ಗ: ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಹೆಚ್.ಆರ್. ಬಸವರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಇಂದು 18 ಜಿಲ್ಲೆಗಳ ರೈತ ಸಂಘದ ಪದಾಧಿಕಾರಿಗಳು, ರಾಜ್ಯ ಸಮಿತಿ ಪದಾಧಿಕಾರಿಗಳು ಸಭೆ ಸೇರಿ ಸಮಾಲೋಚನೆ ನಡೆಸಿದ್ದು, ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ನೂತನ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅವರು, ಇನ್ನುಮುಂದೆ ಕೋಡಿಹಳ್ಳಿ ಚಂದ್ರಶೇಖರ್ ಹೊರಗಿಟ್ಟು ಸಂಘಟನೆ ಬಲಪಡಿಸುತ್ತೇವೆ. ಎಲ್ಲಾ ರೈತ ಸಂಘಗಳು ಒಂದಾಗಿ ಮಾತುಕತೆಗೆ ಬಂದಲ್ಲಿ ನಾನು ಅಧ್ಯಕ್ಷ ಸ್ಥಾನ ತ್ಯಜಿಸುತ್ತೇನೆ ಎಂದು ಹೇಳಿದ್ದಾರೆ.

ಇದೊಂದು ವಿಶೇಷ ಸಂದರ್ಭ…

1980 ರಲ್ಲಿ ರೈತ ಚಳವಳಿ ಆರಂಭವಾಯ್ತು. 1972 ರಲ್ಲೇ ಶಿವಮೊಗ್ಗದಲ್ಲಿ ರೈತ ಸಂಘ, ಮೂಡಿಗೆರೆಯಲ್ಲಿ ಕಬ್ಬು ಬೆಳೆಗಾರರ ಸಮಾವೇಶವನ್ನು ಪ್ರೊ. ನಂಜುಡಸ್ವಾಮಿ ಮಾಡಿದ್ದರು. ಶಿವಮೊಗ್ಗ ಜಿಲ್ಲೆಗೆ ರೈತ ಸಂಘದ 50 ವರ್ಷ ಚಳವಳಿ ಹಿನ್ನಲೆ ಇದೆ ಎಂದರು.ನರಗುಂದ, ನವಲಗುಂದ ರೈತರು 1980 ರಲ್ಲಿ ತಹಶೀಲ್ದಾರ್ ಕಚೇರಿ ಎದುರು ಧರಣಿ ಕುಳಿತಾಗ ತಹಶೀಲ್ದಾರ್ ಧರಣಿ ನಿರತ ರೈತರ ಮೇಲೆ ಬೂಟುಗಾಲಿನಿಂದ ಹೊಡೆದಾಗ ಘರ್ಷಣೆ ನಡೆದು ಇಬ್ಬರು ರೈತರು ಹುತಾತ್ಮರಾಗಿದ್ದರು. 1980 ರ ಜುಲೈ 22 ರಂದು ಹುಬ್ಬಳ್ಳಿಗೆ ಶಿವಮೊಗ್ಗದಿಂದ ಕಡಿದಾಳು ಶಾಮಣ್ಣ ನಾನು ಸೇರಿದಂತೆ ಹಲವರು ಹುಬ್ಬಳ್ಳಿಗೆ ಹೋಗಿ ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದೆವು. ಜೈಲಿಗೆ ಹೋಗಿ ಬಂಧಿತ ರೈತರನ್ನು ಮಾತನಾಡಿಸಿಕೊಂಡು ಬಂದಿದ್ದೆವು ಎಂದರು.

1980 ರ ಜುಲೈ 23 ಹುಬ್ಬಳ್ಳಿಯಲ್ಲಿ ರೈತಸಂಘಟನೆ ಆರಂಭವಾಗಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ಧಾರವಾಡ, ದಾವಣಗೆರೆ, ಹಾವೇರಿ, ಗದಗ, ಬೀದರ, ಕಲಬುರಗಿ ಸೇರಿ 24 ಜಿಲ್ಲೆಗಳಲ್ಲಿ ಸಂಘಟನೆ ವ್ಯಾಪಿಸಿದೆ. ತ್ಯಾಗ ಬಲಿದಾನದಿಂದ ಕಟ್ಟಿದ ಸಂಘಟನೆ ಕಟ್ಟಲಾಗಿದೆ. ಲಕ್ಷಾಂತರ ರೈತರು ಏಟು ತಿಂದಿದ್ದೇವೆ, ಜೈಲುವಾಸ ಅನುಭವಿಸಿದ್ದೇವೆ. ನೂರಾರು ಮಂದಿ ಪ್ರಾಣ ತೆತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಘಟನೆ ಹಳಿ ತಪ್ಪಿತು. ಮೊದಲೆಲ್ಲಾ ಮರದ ಕೆಳಗೆ ಸಭೆ ನಡೆಸಿ ಯಾವ ಖರ್ಚು ಇಲ್ಲದೇ ಸಭೆ, ಸಂಘಟನೆ ನಡೆಸಲಾಯಿತು. ಇತ್ತೀಚೆಗೆ ರಾಜಕೀಯ ಪಕ್ಷಗಳ ಮಧ್ಯಪ್ರವೇಶದಿಂದ ಸಂಘಟನೆ ಪ್ರಾಮಾಣಿಕರ ಕೈತಪ್ಪಿ ಯಾರ್ಯಾರೋ ಕೈಗೆ ಹೋಯ್ತು. ನಾವು ಕೈಕಟ್ಟಿ ಕುಳಿತುಕೊಳ್ಳುವಂತಾಯಿತು.ಮೊನ್ನೆ ಸ್ಟಿಂಗ್ ಆಪರೇಷನ್ ನಡೆದು ವಾಹಿನಿಯೊಂದರಲ್ಲಿ ರೈತ ಸಂಘದ ಪದಾಧಿಕಾರಿ ಭ್ರಷ್ಟತನ ಬಯಲಾಗಿದೆ.

ಹಸಿರು ಟವೆಲ್ ಹಾಕಿಕೊಂಡು ಓಡಾಡುವುದು ಕಷ್ಟವಾಗಿದೆ ಎನ್ನುವಂತಹ ಪರಿಸ್ಥಿತಿ ಇದೆ. ನಿನ್ನೆ ಕೆಲವು ಕಾರ್ಯಕರ್ತರು ಟವೆಲ್ ಬೈಕ್ ನಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದಾರೆ. ಇದೆಲ್ಲಾ ಬೆಂಗಳೂರಲ್ಲಿ ಕುಳಿತವರಿಗೆ ಅರ್ಥವಾಗಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ನಮ್ಮ ಸಂಘಟನೆ ಇದುವರೆಗೆ ರಾಜ್ಯಮಟ್ಟದ ಸದಸ್ಯರಿಗೆ ವಾಟ್ಸಾಪ್ ನಲ್ಲೇ ಮೆಮೋ ಹಾಕಿ ಮೀಟಿಂಗ್ ಕರೆಯಲಾಗುತ್ತದೆ. ಅದೇ ರೀತಿ ನಾನೇ ಮೀಟಿಂಗ್ ಕರೆದಿದ್ದೆ, ಆ ಸಭೆಗೆ ಯಾರೂ ಹೋಗದಂತೆ ಹೇಳಲಾಗಿತ್ತು. 18 ಜಿಲ್ಲೆಗಳ ಪದಾಧಿಕಾರಿಗಳು, ಶೇ. 75 ರಷ್ಟು ಮಂದಿ ಬಂದಿದ್ದಾರೆ.ತಮ್ಮ ಮೇಲೆ ವಾಹಿನಿಯಲ್ಲಿ ಬಂದ ಸುದ್ದಿಯನ್ನು ಕೋಡಿಹಳ್ಳಿ ಅಲ್ಲಗಳೆಯಲಿಲ್ಲ. ಅದರಲ್ಲಿ ನಾನಿಲ್ಲ ಎಂದು ಅವರು ಸ್ಪಷ್ಟಪಡಿಸಬೇಕಿತ್ತು. ಅವರು ನಮ್ಮ ಮನೆಯಲ್ಲಿ ಉಂಡು ತಿಂದು ಮೋಸ ಮಾಡಿದ್ದಾರೆ ಎಂದು ಹೇಳಿದ್ದು, ಈ ಮೂಲಕ ಅದೆಲ್ಲವೂ ಸತ್ಯ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಈಗ ತನಿಖೆಗೆ ಒತ್ತಾಯಿಸಿದ್ದಾರೆ. ಮೇಲ್ನೋಟಕ್ಕೆ ಹಣ ವರ್ಗಾವಣೆ ಆಗಿರುವುದು ಕಂಡು ಬಂದಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಸತ್ಯಾಂಶ ಹೊರತರಬೇಕು ಎಂದು ಆಗ್ರಹಿಸಿದರು.

ದೆಹಲಿಗೆ ಹೋಗಿದ್ದು ನಿಜ. ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ ಗೊತ್ತಾಗಲಿಲ್ಲವೇ? ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಮಗ ವಾಪಸ್ ಕರೆದುಕೊಂಡು ಬಂದಿದ್ದ. ಒಂದು ವರ್ಷ ಹಿಂದಿನದನ್ನು ಹೀಗ್ಯಾಕೆ ಹೊರಗೆ ತಂದಿದ್ದಾರೆ ಎಂದೆಲ್ಲಾ ಪ್ರಶ್ನಿಸಿದ್ದಾರೆ. ನೀವು ಕೇಜ್ರಿವಾಲ್ ಜೊತೆ ಸೇರಿ ಪ್ರಾಮಾಣಿಕನೆಂದು ತೋರಿಸಿಕೊಂಡಿದ್ದರಿಂದ ಮಾಧ್ಯಮಗಳಲ್ಲಿ ಭಿತ್ತರವಾಗಿದೆ. ಇದರಲ್ಲಿ ಸತ್ಯಾಂಶವಿಲ್ಲ ಎಂದು ಅವರೇ ಸ್ಪಷ್ಟಪಡಿಸಬೇಕಿತ್ತು. ಅವರೇ ಮೊದಲೇ ರಾಜೀನಾಮೆ ಕೊಡಬೇಕಿತ್ತು. ಇದು ಮಾನಹಾನಿಯಂತಹ ಪ್ರಕರಣವಲ್ಲ. ಅತಿದೊಡ್ಡ ಹಣ ವರ್ಗಾವಣೆ ಪ್ರಕರಣ. ನನ್ನಂತಹವನಾಗಿದ್ದರೆ. ವಾಹಿನಿಯಲ್ಲಿ ಸುದ್ದಿ ಬಂದ ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ಪ್ರಾಮಾಣಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ರೈತ ಸಂಘಟನೆಯಿಂದ ಕೋಡಿಹಳ್ಳಿ ಹೊರಹಾಕಿದ್ದೇವೆ ಎಂದರು. ಸಿಎಂಎನ್ ಚಂದ್ರಶೇಖರ್, ಪತ್ನಿ ಮೀನಾಕ್ಷಿ, ಮಗ ನೇಗಿಲು ಹೆಸರಲ್ಲಿ ಕಂಪನಿ ಮಾಡಿದ್ದಾರೆ. ಅವರು ವ್ಯವಹಾರ ಕಂಪನಿ ಮಾಡಿಕೊಳ್ಳಲಿ. ಹಸಿರು ಟವೆಲ್ ತೆಗೆದಿಟ್ಟು ರಿಯಲ್ ಎಸ್ಟೇಟ್ ವ್ಯವಹಾರ ಮಾಡಲಿ. ಹಸಿರು ಶಾಲು ಧರಿಸಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಬಾರದು ಎಂದರು.

ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿದೆ. ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಿಸಿ ರೈತ ಸಂಘಟನೆ ಬೆಳೆಸುತ್ತೇವೆ. ಮೂಲ ಸ್ಥಾಪಕರಾದ ಹೆಚ್.ಎಸ್. ರುದ್ರಪ್ಪ, ಡಾ. ಚಿಕ್ಕಸ್ವಾಮಿ, ಕಡಿದಾಳ್ ಶಾಮಣ್ಣ, ಎನ್.ಡಿ. ಸುಂದರೇಶ್, ಪ್ರೊ ನಂಜುಂಡಸ್ವಾಮಿ ಅವರ ತತ್ವ ಸಿದ್ಧಾಂತಗಳ ಅಡಿಯಲ್ಲಿ ಈ ಹಿಂದೆನಂತೆಯೇ ಸಂಘಟನೆ ನಡೆಯಲಿದೆ. ಇನ್ನುಮುಂದೆ ನಮ್ಮ ಯಾವುದೇ ಬ್ಯಾನರ್ ಗಳಲ್ಲಿ ಅಧ್ಯಕ್ಷರ ಫೋಟೋ ಇರುವುದಿಲ್ಲ. ಸಂಘಟನೆ ಸ್ಥಾಪಿಸಿದ ಹಿರಿಯರ ಫೋಟೋ ಮಾತ್ರ ಬಳಸುತ್ತೇವೆ. ರೈತ ಸಂಘದ ಇತಿಹಾಸವನ್ನೇ ಮರೆ ಮಾಚಲು ಹೊರಟಿದ್ದರು. ಅದಕ್ಕೆ ನಾವು ಅವಕಾಶ ಕೊಡಲ್ಲ. ಸಂಘಟನೆ ವೈಭವ ಮತ್ತೆ ಮರುಕಳಿಸುತ್ತದೆ. ರೈತ ಸಂಘ ನಾಶ ಮಾಡಿದವರು ಮುಖಂಡರೇ ಹೊರತು ರೈತರು ರೈತಸಂಘ ನಾಶ ಮಾಡಿಲ್ಲ. ರೈತ ಸಂಘಟನೆ ಕಟ್ಟಲು ನನ್ನ ಎಲ್ಲಾ ಶ್ರಮ ಹಾಕುತ್ತೇನೆ. ಸಂಘಟನೆಯಿಂದ ದೂರವಾದವರನ್ನು ಮತ್ತೆ ಕರೆ ತರುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಂಘಟನೆ ಬಲಪಡಿಸುತ್ತೇವೆ ಎಂದರು.

ಇದೇ ಮೊದಲ ಬಾರಿಗೆ ರೈತಸಂಘದ ಅಧ್ಯಕ್ಷರೊಬ್ಬರನ್ನು ವಜಾ ಮಾಡಲಾಗಿದೆ. ಸತ್ಯಶೋಧನಾ ಸಮಿತಿ ತನಿಖೆ ನಂತರ ಆರೋಪ ಸಾಬೀತಾದರೆ ಸಂಘಟನೆಯಿಂದಲೇ ಅವರನ್ನು ಉಚ್ಛಾಟನೆ ಮಾಡಲಾಗುವುದು ಎಂದರು.ಹಿಂದೆ ರಾಜಕಾರಣಿಗಳು ತಮ್ಮ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟಿದ್ದರು. ಇವರು ಕೂಡ ಅದೇ ರೀತಿ ಆರೋಪ ಕೇಳಿ ಬಂದಾಗ ರಾಜೀನಾಮೆ ಕೊಡಬೇಕಿತ್ತು. ನಾವು ಮರ್ಯಾದೆ ಉಳಿಸಿಕೊಳ್ಳುವ ಉದ್ದೇಶದಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದೇವೆ. ಬೇರೆ ಬೇರೆ ರೈತ ಸಂಘಟನೆಯವರನ್ನು ಭೇಟಿ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಂಘಟನೆ ಒಟ್ಟುಗೂಡಿಸಿಕೊಂಡು ಬಲ ಪಡಿಸುತ್ತೇವೆ ಎಂದರು.ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಬಳಿದು ಹಲ್ಲೆಗೆ ಯತ್ನಿಸಿರುವುದನ್ನು ತೀವ್ರವಾಗಿ ಖಂಡಿಸಿದ ಹೆಚ್.ಆರ್. ಬಸವರಾಜಪ್ಪ ಸರ್ಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಚಿಕ್ಕಸ್ವಾಮಿ, ಹಿಟ್ಟೂರು ರಾಜು, ಶಶಿಕಾಂತ್ ಪಡಸಲಗಿ, ಸಿದ್ಧವೀರಪ್ಪ, ಕುರುವ ಗಣೇಶ್, ಟಿ.ಎಂ. ಚಂದ್ರಪ್ಪ, ನಿಂಗಪ್ಪ, ಸಿದ್ಧವೀರಪ್ಪ, ಸುಭಾಷ್, ಬಸವನಗೌಡ ಪಾಟೀಲ್, ದುಗ್ಗಪ್ಪಗೌಡ, ಅಗ್ನಿ ಶಿವಪ್ಪ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…