ಶಿವಮೊಗ್ಗ: ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳು ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ಅವಕಾಶ ಒದಗಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.

ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ ಆವರಣದಲ್ಲಿ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ಏಳು ದಿನಗಳ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಐದನೇ ದಿನದ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾವೈಕ್ಯತಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಮಾನವೀಯ ಸಂಬಂಧ ಪರಿಸರ ಪ್ರೇಮ ಹಾಗೂ ಶಿಸ್ತುಬದ್ಧ ಜೀವನ ನಡೆಸಲು ಮತ್ತು ತಮ್ಮಲ್ಲಿರುವ ಪ್ರತಿಭೆ ಅನಾವರಣ ಮಾಡಲು ಸೂಕ್ತ ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದರು.

ಮಕ್ಕಳು ಪುಸ್ತಕ ಅಧ್ಯಯನದ ಜತೆಯಲ್ಲಿ ಇತರೆ ಸಹ ವಿದ್ಯಾರ್ಥಿಗಳೊಂದಿಗೆ ಶಿಬಿರಗಳಲ್ಲಿ ಪಾಲ್ಗೊಂಡು ಕಲಿಕಾ ಪ್ರಗತಿಯಲ್ಲಿ ತೊಡಗಿಸಿಕೊಳ್ಳಬೇಕು. ಸಂವಹನ ಕೌಶಲ್ಯ, ಪರಸ್ಪರ ಸೌಹಾರ್ದತೆ, ಉತ್ತಮ ವಿಚಾರಗಳ ಕಲಿಕೆಗೆ ಶಿಬಿರಗಳು ಸಹಕಾರಿ ಆಗುತ್ತವೆ. ಗ್ರಾಮೀಣ ಪ್ರದೇಶದ ಸೊಗಡಿನ ಪರಿಚಯ ಆಗುತ್ತದೆ. ಜನಜೀವನ ಶೈಲಿಯ ಬಗ್ಗೆ ಅರಿವು ಮೂಡುತ್ತದೆ ಎಂದರು.
ಜಾಗತಿಕ ತಾಪಮಾನದ ಕುರಿತ ಜಾಗೃತಿ ಪೋಸ್ಟರ್ ಬಿಡುಗಡೆಗೊಳಿಸಿದರು. ಶಿಬಿರದ ಕಾರ್ಯಕ್ರಮಾಧಿಕಾರಿ ಡಾ. ಪರಿಸರ ನಾಗರಾಜ್ ಮಾತನಾಡಿ, ರಾಜ್ಯಮಟ್ಟದ ಶಿಬಿರದಲ್ಲಿ ಮಕ್ಕಳಿಗೆ ತರಬೇತಿಗಳನ್ನು ನೀಡುವುದರ ಜತೆಯಲ್ಲಿ ಉತ್ತಮ ಉಪನ್ಯಾಸ, ಪರಿಸರಸ್ನೇಹಿ ಕಾರ್ಯಕ್ರಮಗಳನ್ನು ನಾಯಕತ್ವ ಗುಣದ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಶಿಬಿರಗಳಿಂದ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ವೇದಿಕೆಯಲ್ಲಿ ಉಪನ್ಯಾಸಕರಾದ ಡಾ. ಶುಭಾ ಮರವಂತೆ, ಡಾ. ರಾಚಪ್ಪ, ಡಾ. ವೆಂಕಟೇಶ್, ಪರಶುರಾಮ್, ಮಲ್ಲಿಕಾರ್ಜುನ್, ಹೊರರಾಜ್ಯದ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…