
ಶಿವಮೊಗ್ಗ: ತಂಬಾಕು ಪರಿಸಕ್ಕೆ ಮಾರಕ ತಂಬಾಕಿನಿಂದ ಕೇವಲ ಮಾನವನ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರದ ಮೇಲೂ ಕೂಡ ಅನೇಕ ದುಷ್ಪರಿಣಾಮ ಬೀರುತ್ತದೆ. ಒಬ್ಬ ಧೂಮಪಾನಿ ತನ್ನ ಜೀವನದಲ್ಲಿ 5 ಟನ್‌ನಷ್ಟು ಕಾರ್ಬನ್ ಡಯಾಕ್ಸೈಡ್ ಅನ್ನು ಹೊರಹಾಕುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿಯ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ಒ.ಮಲ್ಲಪ್ಪ ಹೇಳಿದರು.

ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಜಾಗೃತಿ ಜಾಥಾ ಹಾಗೂ ಗುಲಾಬಿ ಅಂದೋಲನ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿ,
ಸಿಗರೇಟ್ ತ್ಯಾಜ್ಯದಿಂದ ಭೂಮಿಯ ಮೇಲೆ ಕಲುಷಿತ ವಾತಾವರಣ ಉಂಟಾಗುತ್ತಿದ್ದು, ಭೂಮಿಯೊಳಗಿನ ಅಂತರ್ಜಲ ಸಹ ಕಲುಷಿತವಾಗುತ್ತಿದೆ. ತಂಬಾಕು ಸೇವನೆಯಿಂದ ಮನುಷ್ಯ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದು, ಕುಟುಂಬ ಹಾಗೂ ಪರಿಸರದ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

ತಂಬಾಕು ವ್ಯಸನಿಗಳು ದುಶ್ಚಟದಿಂದ ಹೊರಬರಲು ಸಹಾಯ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮೆಗ್ಗಾನ್ ಭೋದನಾ ಆಸ್ಪತ್ರೆಯಲ್ಲಿ ತಂಬಾಕು ವ್ಯಸನಮುಕ್ತ ಕಾರ್ಯ ನಿರ್ವಹಿಸುತ್ತಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಿಂದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಯಿತು. ಕೋಟ್ಪಾ ದಾಳಿಗಳನ್ನು ಹಮ್ಮಿಕೊಳ್ಳುವ ಮೂಲಕವು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಗುಲಾಬಿ ಅಂದೋಲನದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಪ್ರತಿಮಾ ಡಾಕಪ್ಪ, ಹೇಮಂತ್, ರಜನಿಕುಮಾರಿ, ಗಂಗೋತ್ರಿ ಪ್ಯಾರಾಮೆಡಿಕಲ್ ಕಾಲೇಜ್ ಪ್ರಾಚಾರ್ಯ ವೀರೇಂದ್ರ, ರೋಟರಿ ರಿವರ್‌ಸೈಡ್ ಅಧ್ಯಕ್ಷ ಶಂಕರ್, ಎಂ.ಆರ್.ಬಸವರಾಜ್, ಡಾ. ಶಾಂತಾ ಸುರೇಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ ಉಪಸ್ಥಿತರಿದ್ದರು.