ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದನ್ನು ವಿರೋಧಿಸಿ ಅವರನ್ನು ಬಂಧಿಸಿ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಇಂದು ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಬಸ್ ನಿಲ್ದಾಣದ ಬಳಿ ಅಶೋಕ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಬಳಿಕ ಆಮ್ ಆದ್ಮಿ ಪಕ್ಷದ ರಾಜ್ಯ ನಾಯಕ ಆಪ್ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಗೋಪಿವೃತ್ತದವರೆಗೆ ಮೆರವಣಿಗೆ ನಡೆಸಿ ಅಲ್ಲಿಯೂ ಪಕ್ಷದ ಕಾರ್ಯಕರ್ತರ ಪ್ರತಿಭಟನಾ ಸಭೆ ನಡೆಸಲಾಯಿತು.ಶಾಸಕ ಕೆ.ಎಸ್. ಈಶ್ವರಪ್ಪ ಅವರು ಕೇಸರಿ ಧ್ವಜ ಭಾರತದ ರಾಷ್ಟ್ರಧ್ವಜ ಆಗಬಹುದು ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದ ಪ್ರತಿಭಟನಾಕಾರರು ಈಶ್ವರಪ್ಪ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಅವರನ್ನು ಶಾಸಕ ಸ್ಥಾನದಿಂದ ಉಚ್ಛಾಟಿಸಬೇಕೆಂದು ಒತ್ತಾಯಿಸಿದರು. ಯಾವುದೇ ಅಭಿವೃದ್ಧಿ ಮಾಡದೇ ಎಲ್ಲಾ ಕಳಪೆ ಕಾಮಗಾರಿಯ ಮೂಲಕ ನಗರವನ್ನು ಹಾಳುಗೆಡವಿದ್ದಾರೆ. ಕಮಿಷನ್ ಆಸೆಗೆ ಸ್ಮಾರ್ಟ್ ಸಿಟಿ ಕಾಮಗಾರಿ ಸಂಪೂರ್ಣ ಕಳಪೆ ಮಾಡಲಾಗಿದೆ.

ಅದನ್ನು ಮುಚ್ಚಿಹಾಕಲು ಹಿಂದುತ್ವದ ಸೋಗಿನಲ್ಲಿ ಪದೇ ಪದೇ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ರಾಷ್ಟ್ರಧ್ವಜಕ್ಕೆ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ ಕೆ.ಎಸ್. ಈಶ್ವರಪ್ಪ ಅವರನ್ನು ತಕ್ಷಣ ಬಂಧಿಸುವಂತೆ ಆಮ್ ಆದ್ಮಿ ಮುಖಂಡರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಜ್ಯ ನಾಯಕರಾದ ದರ್ಶನ್ ಜೈನ್, ವಿಜಯ್ ಶರ್ಮಾ, ಭಾಸ್ಕರರಾವ್, ಗೋಪಾಲ್, ಮನೋಹರ್ ಗೌಡ, ಏಳುಮಲೈ(ಕೇಬಲ್ ಬಾಬು), ಡಾ. ನೇತ್ರಾವತಿ ,ಗಾಯತ್ರಿದೇವಿ, ತಲ್ಕಿನ್ ಆಹಮ್ಮದ್, ಕಿರಣ್, ಹರೀಶ್, ರಮೇಶ್, ಅಮೃತ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…