ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರಿಗೆ ಮತ್ತು ನಾಡಗೀತೆಗೆ ಅವಮಾನಿಸಿದ್ದನ್ನು ವಿರೋಧಿಸಿ ಮತ್ತು ಅಂತಹವರನ್ನು ಸಮರ್ಥಿಸಿಕೊಳ್ಳುತ್ತಿರುವ ಶಿಕ್ಷಣ ಸಚಿವ ನಾಗೇಶ್ ಅವರ ನೀತಿ ಖಂಡಿಸಿ, ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಬೆಳಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆಯ ಹುನ್ನಾರ, ನಾಡಗೀತೆಗೆ ಅವಮಾನ ವಿರೋಧಿ ಹೋರಾಟ ಸಮಿತಿ ಇಂದು ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ನಾಡಗೀತೆ ವಿರೂಪಗೊಳಿಸಿ ನಾಡಿಗೆ ದ್ರೋಹವೆಸಗಿ ರಾಷ್ಟ್ರಕವಿ ಕುವೆಂಪು ಅವರನ್ನು ಅವಮಾನಿಸಿ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿ ಉದ್ದೇಶಪೂರ್ವಕವಾಗಿ ಬಸವಣ್ಣನವರ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಪಠ್ಯ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಂಬೇಡ್ಕರ್ ಮತ್ತು ಇನ್ನಿತರ ದಾರ್ಶನಿಕರ ಅವಹೇಳನಕಾರಿ ಬರವಣಿಗೆ ಬರೆದಿರುವ ರೋಹಿತ್ ಚಕ್ರತೀರ್ಥ ಅವರಿಗೆ ಶಿಕ್ಷೆಯಾಗಬೇಕು. ಇದಕ್ಕೆ ಬೆಂಬಲಿಸುತ್ತಿರುವ ಶಿಕ್ಷಣ ಸಚಿವ ನಾಗೇಶ್ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.ಇತ್ತೀಚಿನ ದಿನಗಳಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎನಿಸಿಕೊಂಡಿದ್ದ ಕರ್ನಾಟಕ ಈಗ ಅಶಾಂತಿಯ ಆಗರವಾಗಿದೆ. ಮತ, ಜಾತಿಗಳ ನಡುವೆ ಕಂದಕ ಹೆಚ್ಚಾಗುತ್ತಿದೆ. ಮನುಷ್ಯ ಪ್ರೀತಿಗಳು ಮರೆಯಾಗುತ್ತಿವೆ. ಶಾಂತಿ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುವ ಕೈಗಳೇ ಹೆಚ್ಚಾಗುತ್ತಿವೆ. ರಾಜಾರೋಷವಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕುವೆಂಪು ಬರೆದ ನಾಡಗೀತೆ ತಿರುಚುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ಉಲ್ಲೇಖಿಸಿ ರೋಹಿತ್ ಚಕ್ರತೀರ್ಥ ಅವಹೇಳನ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದಾರೆ. ಇಂತಹವರನ್ನು ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿ ಮಾಡಿರುವುದು ಸರಿಯಲ್ಲ. ವ್ಯಕ್ತಿ ವಿಕಸನಕ್ಕೆ ಪೂರಕವಾಗುವ ಬದಲು ಮನೋವಿಕಾರಗಳನ್ನು ತುಂಬಲು ಪ್ರಯತ್ನಿಸುತ್ತಿದ್ದಾರೆ. ಇಂತವರು ಈ ಸ್ಥಾನದಲ್ಲಿರುವುದ ಸರಿಯಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.ಆದಷ್ಟು ಬೇಗ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳು ಸಿಗಬೇಕು. ಯಾವುದೇ ಕಾರಣಕ್ಕೂ ಹೊಸ ಪಠ್ಯ ಪುಸ್ತಕ ವಿತರಿಸಬಾರದು. ಅದನ್ನ ಹಿಂತೆಗೆದುಕೊಳ್ಳಬೇಕು. ಚಕ್ರತೀರ್ಥನನ್ನು ಬಂಧಿಸಬೇಕು. ಶಿಕ್ಷಣ ಸಚಿವ ನಾಗೇಶ್ ಅವರನ್ನು ವಜಾ ಮಾಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ನಮ್ಮ ಹಕ್ಕು ವೇದಿಕೆ, ಕರ್ನಾಟಕ ಜನಶಕ್ತಿ, ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪ್ರೊ. ರಾಜೇಂದ್ರ ಚೆನ್ನಿ, ಕೆ.ಟಿ. ಗಂಗಾಧರ್, ಹೆಚ್.ಆರ್. ಬಸವರಾಜಪ್ಪ, ಡಿ. ಮಂಜುನಾಥ್, ಕೆ.ಪಿ. ಶ್ರೀಪಾಲ್, ಹೆಚ್.ಸಿ. ಯೋಗೀಶ್, ಎಂ. ಗುರುಮೂರ್ತಿ, ಜಿ. ಕೆಂಚಪ್ಪ, ಬಿ.ಎ. ರಮೇಶ್ ಹೆಗ್ಡೆ, ಶ್ರೀಕಾಂತ್, ಡಾ. ಶಾಂತಾ ಸುರೇಂದ್ರ, ಮಧುಸೂದನ್, ಕೆ. ಚೇತನ್, ಎಸ್.ವಿ. ರಾಜಮ್ಮ, ಅನನ್ಯ ಶಿವು, ಭಾಗ್ಯಲಕ್ಷ್ಮಿ, ಶಾಮಸುಂದರ್, ರತ್ನಯ್ಯ, ಚಂದ್ರಪ್ಪ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…