ಶಿವಮೊಗ್ಗ: ಕರ್ನಾಟಕ ರಾಜ್ಯದ ಎಲ್ಲಾ ತಾಲೂಕು ಮಟ್ಟಗಳಲ್ಲೂ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಕ್ರೀಡಾಕೂಟ ಆಯೋಜಿಸಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ನಗರದ ನೆಹರೂ ಕ್ರೀಡಾಂಗಣದಲ್ಲಿ ಇಂದು ಏರ್ಪಡಿಸಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಗ್ರಾಪಂಗಳ ಪ್ರತಿನಿಧಿಗಳ ಕ್ರೀಡಾಕೂಟ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಎಲ್ಲಾ ಸದಸ್ಯರು ಸಂತೋಷದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. 48 ಗ್ರಾಪಂಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಯಾವುದೋ ಒಂದು ಪಂಚಾಯಿತಿ ಕ್ರೀಡಾಕೂಟದಲ್ಲಿ ಭಾಗವಹಿಸಿಲ್ಲ ಎಂಬುದನ್ನು ದೊಡ್ಡದು ಮಾಡುವುದು ಬೇಡ. ಅವರನ್ನು ಕೂಡ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ವಿನಂತಿಸಲಾಗುವುದು. ಸಣ್ಣಪುಟ್ಟ ಲೋಪದೋಷಗಳು ಇರುತ್ತವೆ. ಅದನ್ನು ಸರಿಪಡಿಸಿಕೊಂಡು ಹೋಗಬೇಕು ಎಂದರು.  ಪಠ್ಯ ಪರಿಷ್ಕರಣಾ ಸಮಿತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಹಿಂದೆ ಬರಗೂರು ರಾಮಚಂದ್ರಪ್ಪನವರ ಅಧಿಕಾರದ ಅವಧಿಯಲ್ಲಿ ಅವರ ವಿಚಾರಕ್ಕೆ ತಕ್ಕೆ ಹಾಗೇ ಪಠ್ಯಗಳು ಬಂದಿದ್ದವು.

ಈ ಬಾರಿಯ ಪಠ್ಯ ಪರಿಷ್ಕರಣಾ ಸಮಿತಿ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳ ಮನಸ್ಸಿಗೆ ತಲುಪಿಸಬೇಕೆಂಬ ದೃಷ್ಠಿಯಿಂದ ಕೆಲವೊಂದು ಪಠ್ಯಗಳನ್ನು ಪರಿಷ್ಕರಿಸಿದೆ. ಅದರಲ್ಲೂ ಕೂಡ ಹಿರಿಯ ಸಾಹಿತಿಗಳು ಮತ್ತು ವಿಚಾರವಂತರು ಯಾವುದು ಸರಿ ಇಲ್ಲ ಮತ್ತು ಏಕೆ ಸರಿ ಇಲ್ಲ ಎಂಬುದನ್ನು ಸಮಿತಿಯ ಗಮನಕ್ಕೆ ತಂದು ತಿದ್ದುಪಡಿ ಮಾಡಬಹುದಿತ್ತು. ಅದನ್ನು ಬಿಟ್ಟು ಅದರಲ್ಲೂ ರಾಜಕೀಯ ತಂದು ಅವರ ವೈಚಾರಿಕಾ ಸಿದ್ಧಾಂತಗಳನ್ನು ತಂದು ಗೊಂದಲ ಮೂಡಿಸುವ ಕಾರ್ಯವನ್ನು ಕೆಲವು ಸಾಹಿತಿಗಳು ರಾಜಕೀಯ ಮಾಡುತ್ತಿದ್ದಾರೆ. ಎಲ್ಲರೂ ಆ ರೀತಿ ಮಾಡಿಲ್ಲ. 9 ಜನ  ತಮ್ಮ ಪಠ್ಯ ಬೋಧಿಸುವುದು ಬೇಡವೆಂದು ಬರೆದಿದ್ದಾರೆ. ಹಾಗೇ ಹೇಳಿದ ಸಾಹಿತಿಗಳಲ್ಲಿ 7 ಜನರ ಪಠ್ಯಗಳನ್ನು ತೆಗೆದುಕೊಂಡೇ ಇಲ್ಲ. ಆದರೂ ಅವರು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಭಾರತೀಯ ವೀರರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಬಿಟ್ಟು ಅಲೆಕ್ಸಾಂಡರ್ ದಿ ಗ್ರೇಟ್, ಮೈಸೂರು ಹುಲಿ ಟಿಪ್ಪುಸುಲ್ತಾನ್, ಮೊಘಲ್ ದೊರೆಗಳ ಪಾಠ ನಮಗೆ ಏಕೆ ಬೇಕು? ನಮ್ಮ ದೇಶದ ವೀರ ರಾಜರು ಇಲ್ಲವೇ? ವಿದೇಶಿ ವ್ಯಕ್ತಿಗಳು ಮತ್ತು ಆಕ್ರಮಣಕಾರರ ಪಠ್ಯಗಳನ್ನು ನಮ್ಮ ಭಾರತೀಯ ಮಕ್ಕಳ ಮೇಲೆ ಹೇರಬೇಕೆ ಎಂದು ಅವರು ಪ್ರಶ್ನಿಸಿದರು.

ವರದಿ ಮಂಜುನಾಥ್ ಶೆಟ್ಟಿ…