ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಹಾಲುಮತ ಮಹಾಸಭಾ, ಜಿಲ್ಲಾ ಕನಕ ಮಹಿಳಾ ಸಂಘದ ವತಿಯಿಂದ ರಾಜಮಾತೆ ಅಹಿಲ್ಯಾ ಬಾಯಿ ಹೋಳ್ಕರ್ ಅವರ ಜಯಂತಿ ಹಾಗೂ ‘ಕುರುಬರ ಎಸ್.ಟಿ. ಮೀಸಲಾತಿಗಾಗಿ ಹಕ್ಕೊತ್ತಾಯದ ನಡೆ ಜಾಗೃತ ಸಭೆ’ ಕಾರ್ಯಕ್ರಮವನ್ನು ಇಲ್ಲಿನ ಕುರುಬರ ಹಾಸ್ಟೆಲ್ ಸಭಾಂಗಣದಲ್ಲಿ ಅಯೋಜಿಸಲಾಗಿತ್ತು.
ಸಭೆಯಲ್ಲಿ ಕರ್ನಾಟಕದಲ್ಲಿ ಕುರುಬ ಜಾತಿಗೆ ಎಸ್.ಟಿ. (ಪರಿಶಿಷ್ಟ ಪಂಗಡ) ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಲ್ಲಾ ಕುರುಬರಿಗೂ ಎಸ್.ಟಿ. ಮೀಸಲಾತಿ ವಿಸ್ತಾರಗೊಳಿಸುವ ಸಂಬಂಧ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಸ್ವೀಕರಿಸಿ ಅಂಗೀಕರಿಸಲು ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಕೈಗೊಂಡು, ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಕಳುಹಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜಮಾತೆ ಅಹಿಲ್ಯಾಬಾಯಿ ಹೋಳ್ಕರ್ ಅವರ ಕುರಿತು ವಿಶೇಷ ಉಪನ್ಯಾಸವನ್ನು ಸಾಹಿತಿ ಹಾಗೂ ಸಂಶೋಧಕ ಡಾ. ಲಿಂಗದಹಳ್ಳಿ ಹಾಲಪ್ಪ, ಕುರುಬ ಸಮುದಾಯದ ಧನ್‍ಗರ್ ಜಾತಿಗೆ ಸೇರಿದ ಅಹಿಲ್ಯಾಬಾಯಿ ತಮ್ಮ ಅಸಾಧಾರಣ ಪ್ರತಿಭೆ ಮತ್ತು ಧೀಃಶಕ್ತಿಯಿಂದ ಸಾಮ್ರಾಜ್ಞೆಯಾಗಿ 35 ವರ್ಷಗಳ ಕಾಲ ರಾಜ್ಯಭಾರ ಮಾಡಿದರು ಎಂದರು.
ಇಂದು ನಮ್ಮ ಸಂವಿಧಾನದಲ್ಲಿ ಅಳವಡಿಸಿರುವ ಬಾಲ್ಯವಿವಾಹ ನಿಷೇಧ, ಸತಿ ಪದ್ಧತಿ ನಿಷೇಧ, ಸಮಾನತೆ, ಸರ್ವಧರ್ಮ ಸಮನ್ವಯತೆ ಮುಂತಾದ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರು. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದರು. ಸರ್ವಧರ್ಮವನ್ನೂ ಸಮನ್ವಯತೆಯಿಂದ ಕಾಣುತ್ತಿದ್ದ ಅವರು 3100ಕ್ಕೂ ಹೆಚ್ಚು ದೇವಾಲಯಗಳ ಪುನರ್ಜೀವನದ ಜೊತೆಗೆ 250ಕ್ಕೂ ಹೆಚ್ಚು ಫೀರ್‍ದರ್ಗಾಗಳ ನಿರ್ಮಾಣ, ಚರ್ಚ್‍ಗಳ ನಿರ್ಮಾಣ, ಹೋಬಳಿಗೊಂದು ತ್ವರಿತ ನ್ಯಾಯಾಲಯಗಳನ್ನು ರಚಿಸಿದ್ದರು ಎಂದರು.

ಭಾರತದ ಇತಿಹಾಸದಲ್ಲಿ ಸಾಮ್ರಾಟರಲ್ಲಿ ಅಶೋಕ ಚಕ್ರವರ್ತಿಯನ್ನು ಒಂದು ಕಡೆ ಪೂಜಿಸಿದರೆ, ಅಹಿಲ್ಯಾಬಾಯಿ ಹೋಳ್ಕರ್ ಅವರನ್ನು 22 ಕಡೆಗಳಲ್ಲಿ ಪೂಜಿಸಲಾಗುತ್ತಿದೆ. 3 ಕಡೆ ದೇವರಿಗೆ ಸಮಾನವಾಗಿ ಅವರ ಮೂರ್ತಿಯನ್ನು ಪೂಜಿಸಿದರೆ, ಉಳಿದ 19 ಕಡೆಗಳಲ್ಲಿ ಆಕೆಯನ್ನೇ ದೇವರೆಂದು ಪೂಜಿಸಲಾಗುತ್ತಿದೆ. 100ಕ್ಕೂ ಹೆಚ್ಚು ಇತಿಹಾಸಕಾರರ ಇವರ ಚರಿತ್ರೆಯನ್ನು ಬರೆದು ಹಲವಾರು ಬಿರುದುಗಳನ್ನು ನೀಡಿದ್ದಾರೆ. ಅವರ ಆಡಳಿತವನ್ನು ಸರ್ವಾಂಗೀಣ ಕರ್ಮಯೋಗಿ ಆಡಳಿತ ಎಂದು ಪ್ರಶಂಸಿಸಿದ್ದಾರೆ. ಇಂತಹ ಪೂಜನೀಯ ರಾಜಮಾತೆಯ ಸಂತತಿಯವರು ನಾವೆಂದು ಹೇಳಿಕೊಳ್ಳಲು ನಮಗೆಲ್ಲಾ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಕುರುಬ ಜಾತಿ ಎಸ್.ಟಿ. ಸೇರ್ಪಡೆ ಹೋರಾಟ ಕುರಿತು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ಮತ್ತು ಉಪಾಧ್ಯಕ್ಷ ಡಾ. ಡಿ.ಟಿ. ಪ್ರಶಾಂತ್ ಸವಿವರವಾಗಿ ವಿವರಿಸಿದರು.
ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ದಾನೇಶ್, ಕಾರ್ಯಾಧ್ಯಕ್ಷ ಗಣೇಶ್ ಬಿಳಿಗಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ಬಾಬು, ಕನಕ ಮಹಿಳಾ ಸಂಘ, ಹಾಲುಮತ ಮಹಾಸಭಾ ಹಾಗೂ ಅಹಿಲ್ಯಾಬಾಯಿ ಹೋಳ್ಕರ್ ಪರಿಷತ್‍ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…