ಶಿವಮೊಗ್ಗ: ಹಿಂದೂಗಳ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ಕಾರ್ಯಕರ್ತರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ದೇಶದಲ್ಲಿ ಇಸ್ಲಾಮಿಕ್ ಜಿಹಾದಿ ಮತ್ತು ಧರ್ಮಾಂದತೆ, ಹಿಂಸಾಚಾರ ಹೆಚ್ಚುತ್ತಿದೆ. ಕೆಲ ತಿಂಗಳುಗಳಿಂದ ದೇಶಾದ್ಯಂತ ಜಿಹಾದಿ ಮತಾಂಧತೆ ಹೆಚ್ಚುತ್ತಿದ್ದು, ಹಿಂದೂಗಳ ಮೇಲೆ ವ್ಯವಸ್ಥಿತವಾದ ದಾಳಿ ನಡೆಸಲಾಗುತ್ತಿದೆ. ರಾಮನವಮಿಯಂದು ದೇಶಾದ್ಯಂತ ಮೆರವಣಿಗೆ ಮತ್ತು ಕಲ್ಲು ತೂರಾಟಗಳನ್ನು ವ್ಯವಸ್ಥಿತವಾಗಿ ನಡೆಸಲಾಯಿತು. ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದರು.
ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಅವರನ್ನು ಬರ್ಭರವಾಗಿ ಹತ್ಯೆ ಮಾಡಲಾಗಿದೆ. ಹಲವೆಡೆ ದಾಳಿ ಕೂಡ ನಡೆದಿದೆ. ಇತ್ತೀಚೆಗೆ ಸಹೋದರಿ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಲ್ ಅವರ ಹೇಳಿಕೆಗಳ ಮೇಲೆ ಕಳೆದ ಎರಡು ಶುಕ್ರವಾರದಂದು ಪ್ರಾರ್ಥನೆಯ ನಂತರ ಮಸೀದಿಗಳಿಂದ ಹೊರಬಂದ ಗಲಭೆಕೋರರು ಹಿಂದೂಗಳ ಮನೆಗಳ ಮೇಲೆ, ಅಂಗಡಿಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ದೇವಸ್ಥಾನಗಳಿಗೆ ಹಾನಿ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಪಶ್ಚಿಮ ಬಂಗಾಳ, ಕೇರಳದಂತಹ ರಾಜ್ಯಗಳ ಸರ್ಕಾರಗಳು ಇಸ್ಲಾಮಿಕ್ ಜಿಹಾದಿಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ದೂರಿದರು.

ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುವ ಕೆಲವು ರಾಜಕೀಯ ಪಕ್ಷಗಳು ದೇಶದಲ್ಲಿ ಇಂತಹ ಅಶಾಂತಿಗಳು ನಡೆಯುತ್ತಿದ್ದರೂ ಕೂಡ ಮೌನವಹಿಸಿವೆ. ಜಾತ್ಯತೀತ ಪಕ್ಷಗಳು ಜಾಣತನ ಪ್ರದರ್ಶಿಸುತ್ತಿವೆ. ಹಿಂದೂ ಸಮಾಜ ಇನ್ನು ಸಹಿಸುವುದಿಲ್ಲ. ಈಗಾಗಲೇ ಹಿಂದೂಗಳು ಆಕೋಶಗೊಂಡಿದ್ದಾರೆ ಎಂದು ತಿಳಿಸಿದರು.
ಗಲಭೆಕೋರರನ್ನು ರಾಷ್ಟ್ರೀಯ ಸುರಕ್ಷತಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕು. ಗಡಿಪಾರು ಮಾಡಬೇಕು. ಜಿಹಾದಿ ಭಾಷಣಗಳು ಕೊನೆಯಾಗಬೇಕು. ಬೆದರಿಕೆಗೆ ಒಳಗಾದ ಹಿಂದೂಗಳಿಗೆ ಭದ್ರತೆ ಒದಗಿಸಬೇಕು. ಗಲಭೆಗೆ ಪ್ರಚೋದನೆ ಮಾಡುವ ಮಸೀದಿ, ಮದರಸಾಗಳನ್ನು ತನಿಖೆಗೆ ಒಳಪಡಿಸಬೇಕು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಜಮಿಯತ್ ಉಲೇಮಾ ಎ ಹಿಂದ್ ಮುಂತಾದ ಮೂಲಭೂತವಾದಿ ಸಂಘಟನೆಗಳ ಮೇಲೆ ನಿಷೇಧ ಹೇರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷದ್‍ನ ಜಿಲ್ಲಾಧ್ಯಕ್ಷ ಜೆ.ಆರ್. ವಾಸುದೇವ್, ಕಾರ್ಯದರ್ಶಿ ನಾರಾಯಣ್ ಜಿ. ವರ್ಣೇಕರ್, ನಗರಾಧ್ಯಕ್ಷ ಸತೀಶ್ ಮುಂಚೆಮನೆ, ಬಜರಂಗದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ಪ್ರಮುಖರಾದ ಎಸ್.ಆರ್. ಸುಧಾಕರ್, ಅಂಕುಶ್, ಕಿರಣ, ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…