ಶಿವಮೊಗ್ಗ: ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಕನ್ನಡ ವಿರೋಧಿ ನೀತಿ ಖಂಡಿಸಿ ಹಾಗೂ ನಾಡ ದ್ರೋಹಿಗಳ ಬಂಧನಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ಕುಮಾರ್ ಶೆಟ್ಟಿ ಬಣ) ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇತ್ತೀಚಿಗೆ ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗಾಗಿ ಸಮಿತಿ ರಚನೆ ಮಾಡಿ ಅದರ ನೇತೃತ್ವವನ್ನು ರೋಹಿತ್ ಚಕ್ರತೀರ್ಥರವರಿಗೆ ವಹಿಸಿತ್ತು. ಶಾಲಾ ಮಕ್ಕಳಿಗೆ ನಾಡು ನುಡಿಗಾಗಿ ದುಡಿದವರ, ಮಡಿದವರ, ಹಿರಿಮೆಯ, ವಾಸ್ತವ ಸಂಗತಿಗಳನ್ನು ತಿಳಿಸಿ ಕೊಡಬೇಕಾಗಿತ್ತು. ದುರಂತವೆAದರೆ ಈಗಾಗಲೇ ತಮ್ಮ ನಡೆ ನುಡಿಯಲ್ಲಿ ಕನ್ನಡ ವಿರೋಧಿ ತನವನ್ನೆ ಮೈಗೂಡಿಸಿಕೊಂಡ ವ್ಯಕ್ತಿಗೆ ನೇತೃತ್ವವನ್ನು ನೀಡುವ ಮೂಲಕ ರಾಜ್ಯ ಸರ್ಕಾರ ಎಡವಿತ್ತು, ಅದನ್ನು ನಾಡಿನ ಹೆಸರಾಂತ ಲೇಖಕರು ಬುದ್ದಿಜೀವಿಗಳು ವಿರೋಧಿಸಿ ಪತ್ರ ಕೂಡ ಬರೆದಿದ್ದರು. ಈ ಎಚ್ಚರಿಕೆಯ ನಂತರವಾದರೂ ತಮ್ಮ ನಡವಳಿಕೆ ತಿದ್ದಿ ಕೊಳ್ಳಬೇಕಿದ್ದ ಚಕ್ರತೀರ್ಥ ಮತ್ತಷ್ಟು ಉದ್ಧಟತನದಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್, ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ರಾಷ್ಟ ಕವಿ ಕುವೆಂಪು ರವರನ್ನು ಸೇರಿದಂತೆ ಇನ್ನೂ ಹಲವು ಮಹನೀಯರ ಬಗ್ಗೆ ಅವಹೇಳನ ಮಾಡಿ ಅವರನ್ನ ಅವಮಾನಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ನಾಡಿನ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ. ಈಗಾಗಲೇ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಸಮಿತಿ ವಿಸರ್ಜಿಸಿದೆ, ಆದರೆ ಪಠ್ಯದಲ್ಲಿ ಈಗಾಗಲೇ ಸೇರ್ಪಡೆಯಾಗಿರುವ ಅವಹೇಳನಕಾರಿ ವಿಷಯವನ್ನು ತೆಗೆದುಹಾಕಿರುವ ಬಗ್ಗೆ ಯಾವುದೇ ಸ್ಪಷ್ಟನೆ ಕೂಡ ನೀಡಿಲ್ಲ. ನಾಡಿನ ಮಹನೀಯರನ್ನು ಸಾಧಕರನ್ನು ಅವಮಾನಿಸಿರುವ ಚಕ್ರತೀರ್ಥ ರವರನ್ನು ಕೇವಲ ಕೈ ಬಿಟ್ಟರೆ ಸಾಲದು ಬದಲಾಗಿ ಅವರನ್ನು ಬಂಧಿಸಿ ಶಿಕ್ಷಿಸ ಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಆರ್.ಮಂಜು, ರಾಜ್ಯ ಸಂಚಾಲಕ ಎಸ್.ಮಧು, ಪ್ರಧಾನ ಕಾರ್ಯದರ್ಶಿ ವಿಜಯ್ಕುಮಾರ್, ಶೈಲೇಶ್, ಅನಿಲ್, ರವಿ ಇನ್ನಿತರರು ಭಾಗವಹಿಸಿದ್ದರು. 

ವರದಿ ಮಂಜುನಾಥ್ ಶೆಟ್ಟಿ…