ಶಿವಮೊಗ್ಗ: ದೇಶದ ಯುವ ಜನತೆಗೆ ದೇಶ ಸೇವೆಯ ಅವಕಾಶದ ಜೊತೆಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಿ ಕೊಡುತ್ತಿದ್ದ ಮಿಲಿಟರಿ ನೇಮಕಾತಿಯನ್ನು ಗುತ್ತಿಗೆ ನೌಕರ ನೇಮಕಾತಿ ಮಟ್ಟಕ್ಕೆ ಇಳಿಸಿ ಅಗ್ನಿಪಥ ಯೋಜನೆ ಜಾರಿಗೊಳಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮ ಖಂಡನೀಯವಾಗಿದ್ದು, ಇದು ದೇಶದ ಸೈನ್ಯವನ್ನು ದುರ್ಬಲಗೊಳಿಸುವ ಮತ್ತು ನಿರುದ್ಯೋಗವನ್ನು ಹೆಚ್ಚಿಸುವ ಮೂರ್ಖ ಯೋಜನೆಯಾಗಿದೆ ಎಂದು ಮಾಜಿ ಶಾಸಕ, ಕೆ.ಬಿ. ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣ ಸರ್ಕಾರ ಅಗ್ನಿಪಥಕ್ಕೆ ಅಗ್ನಿವೀರರನ್ನು ಆಯ್ಕೆ ಮಾಡುವ ಕ್ರಮವನು ಕೈಬಿಟ್ಟು ಮೊದಲಿನಂತಯೇ ಸೈನಿಕರ ನೇಮಕಾತಿ ಮಾಡುವುದರ ಮೂಲಕ ದೇಶದ ಯುವಕರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.ದೇಶ ಕಾಯುವ ಸೈನಿಕರ ಕೆಲಸ ಹೆಚ್ಚು ಜವಾಬ್ದಾರಿಯುತವಾದುದು. ಸೈನಿಕರಿಗೆ, ಮಾಜಿ ಸೈನಿಕರಿಗೆ ಸಲವತ್ತುಗಳನ್ನು ಹೆಚ್ಚಿಸಬೇಕು ಎಂಬುದಾಗಿ ಬಾಯಿ ಬಡಿದುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಈಗ ಸೈನಿಕರಿಗೆ ಸಿಗುತ್ತಿದ್ದ ಜೀವನ ಭದ್ರತೆಗೆ ಕಲ್ಲುಹಾಕಲು ಹೊರಟಿರುವುದು ಖಂಡನೀಯ ಎಂದು ಹೇಳಿದ್ದಾರೆ.

ನಾಲ್ಕು ವರ್ಷಗಳ ಕಾಲ ಸೈನಿಕರನ್ನು ದುಡಿಸಿಕೊಂಡು ನಂತರ ಅವರನ್ನು ಯಾವುದೇ ಜೀವನ ಭದ್ರತೆಯಿಲ್ಲದೆ ಬೀದಿಗೆ ತಳ್ಳುವುದು ನಿರ್ಲಜ್ಜತನದ ಯೋಜನೆಯಾಗಿದೆ. ಅಗ್ನಿವೀರರಿಗೆ ಬಿಜೆಪಿ ಕಛೇರಿಯಲ್ಲಿ ವಾಚ್ ಮನ್ ಕೆಲಸ ಕೊಡುವುದಾಗಿ ಕೇಂದ್ರ ಸಚಿವರೇ ಹೇಳುತ್ತಿರುವುದನ್ನು ಗಮನಿಸಿದರೆ ಅಧಿಕಾರದ ಲೋಲುಪತೆಯಲ್ಲಿ ಮರೆಯುತ್ತಿರುವ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ ಜೋಡಿ ದೇಶವನ್ನು ಅನಾಹುತದ ಅಂಚಿಗೆ ತಂದು ನಿಲ್ಲಿಸುತ್ತಿರುವುದು ಖಾತ್ರಿಯಾಗಿದೆ ಎಂದರು.ದೇಶದ ಭಧ್ರತೆಯನ್ನು ಅಪಾಯಕ್ಕೆ ಒಡ್ಡುತ್ತಿರುವ ನೀಚತನದ ಕೆಲಸ ಇದಾಗಿದೆ. ಈಗಾಗಲೇ ಸಾಂವಿಧಾನಿಕ ಸಂಸ್ಥೆಗಳನ್ನೆಲ್ಲ ಹಾಳುಗೆಡವಿರುವ, ಸರ್ಕಾರಿ ಸಂಸ್ಥೆಗಳನ್ನೆಲ್ಲ ಮೂರು ಕಾಸಿಗೆ ಮಾರಾಟ ಮಾಡಿರುವ ಬಿಜೆಪಿ ಸರ್ಕಾರ ಇದೀಗ ದೇಶದ ಹೆಮ್ಮೆಯ ಸೈನ್ಯ ವರ್ಚಸ್ಸಿಗೆ ಧಕ್ಕೆ ತರುತ್ತಿರುವುದು ಖಂಡನಾರ್ಹ ಎಂದು ಪ್ರಸನ್ನಕುಮಾರ್ ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…