
ಶಿವಮೊಗ್ಗ: ಯೋಗ ಎನ್ನುವುದು ಆರೋಗ್ಯಕ್ಕೆ ಸುಪ್ರೀಂ ಕೋರ್ಟ್ ಇದ್ದ ಹಾಗೆ ಎಂದು ಶ್ವಾಸಗುರು ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಅವರು ಇಂದು ಗುಂಡಪ್ಪಶೆಡ್ ನ ವಿಶಾಲಸೂರ್ಯ ಉದ್ಯಾನವನದ ಮುಂಭಾಗ ಗುಂಡಪ್ಪಶೆಡ್, ಮಲ್ಲೇಶ್ವರ ನಗರ ಹಾಗೂ ರಾಮರಾವ್ ಬಡಾವಣೆಯ ನಿವಾಸಿಗಳ ಸಂಘ, ಪರೋಪಕಾರಂ ಸಹಯೋಗದೊಂದಿಗೆ ರಾಮರಾವ್ ಬಡಾವಣೆಯಲ್ಲಿ ನಿರ್ಮಿಸಿರುವ ಯೋಗಮಂದಿರಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಪಿ.ವಿ. ರುದ್ರಾರಾಧ್ಯ ಯೋಗ ಮಂದಿರ ನಾಮಫಲಕ ಅಳವಡಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯೋಗ ಎನ್ನುವುದು ಇಡೀ ವಿಶ್ವದಲ್ಲಿ ಅತ್ಯಂತ ಪ್ರಬಲವಾಗಿ ಬೆಳೆಯುತ್ತಿರುವ ಧರ್ಮವಾಗಿದೆ. ಸಾಧಕರು ಬದುಕಿದ್ದಾಗ ಉದಾಸೀನ ಮಾಡಿ ಪ್ರಾಣತ್ಯಾಗ ಮಾಡಿದಾಗ ಅವರಿಗೆ ಗೌರವ ಸಲ್ಲಿಸುವುದು ಸಾಧನೆಯಲ್ಲ. ಸಾಧಕ ಬದುಕಿದ್ದಾಗಲೇ ಗೌರವಿಸಬೇಕು. ಇಲ್ಲದಿದ್ದಾಗ ಹಾಡಿ ಹೊಗಳಿದರೆ ಎನೂ ಉಪಯೋಗವಿಲ್ಲ.

ರುದ್ರಾರಾಧ್ಯರು ಶಬ್ದವಿಲ್ಲದ ಹೂವಿನಂತೆ. ಹೂವು ಅರಳಿದಾಗ ಸುಗಂಧದ ವಾಸನೆ ಎಲ್ಲೆಡೆ ಹಬ್ಬುವಂತೆ ಶಿವಮೊಗ್ಗ ನಗರದಾಧ್ಯಂತ ಸದ್ದಿಲ್ಲದೇ ಯೋಗ ಗುರುಗಳ ಕಾರ್ಯ ನಿರ್ವಹಿಸಿದ್ದಾರೆ ಎಂದರು. ರುದ್ರಾರಾಧ್ಯರ ಸೇವೆಗೆ ಮಕರಂದ ಹೀರುವ ದುಂಬಿಗಳಂತೆ ಯೋಗ ಉಪಾಸಕರು ಅವರ ಬಳಿ ಅಭ್ಯಾಸ ಮಾಡಿ ಯೋಗದ ಜೇನು ಹುಳಗಳಾಗಿದ್ದಾರೆ. ಯೋಗ ಹೊಂದಿಕೊಳ್ಳುವುದನ್ನು ಹೇಳಿಕೊಡುತ್ತದೆ. ಆಸನ ಮಾತ್ರ ಯೋಗ ಅಲ್ಲ, ಯೋಗ ಎನ್ನುವುದು ಒಂದು ಸರ್ವಿಸ್ ಸೆಂಟರ್ ಇದ್ದ ಹಾಗೆ. ಅಲೋಪಥಿ ಮತ್ತು ಹೋಮಿಯೋಪಥಿಗಳು ಕೆಳಗಿನ ನ್ಯಾಯಾಲಯ ಇದ್ದ ಹಾಗೆ. ಆಯುರ್ವೇದ ಎನ್ನುವುದು ಹೈಕೋರ್ಟ್ ಇದ್ದ ಹಾಗೆ. ಆದರೆ, ಇಡೀ ದೇಹಕ್ಕೆ ಯೋಗ ಎನ್ನುವುದು ಸುಪ್ರೀ ಕೋರ್ಟ್ ಇದ್ದ ಹಾಗೆ. ಕಳೆದ 60 ವರ್ಷಗಳಿಂದ ಅನೇಕ ಮಹಾತ್ಮರು ಭಾರತದಲ್ಲಿ ಯೋಗದ ಬೆಳವಣಿಗೆಗೆ ಕಾರ್ಯನಿರ್ವಹಿಸಿದ್ದಾರೆ ಎಂದರು.

ಜೂ. 21 ರಂದು ವಿಶ್ವದ 196 ದೇಶಗಳು ಯೋಗ ದಿನಾಚರಣೆ ಮಾಡುತ್ತಿರುವುದಕ್ಕೆ ಭಾರತವೇ ಕಾರಣವಾಗಿದೆ. ಇದು ಮೋದಿ ಅವರ ಯೋಗ ಸಂಕಲ್ಪ ಶಕ್ತಿ. ಇವತ್ತು ವಿಶ್ವದೆಲ್ಲೆಡೆ ಅತ್ಯಂತ ಜನಪ್ರಿಯ ಪ್ರಾಡಕ್ಟ್ ಎಂದರೆ ಯೋಗ ಎಂದು ಸ್ವೀಕೃತವಾಗಿದೆ. ಔಷಧಿ ಮತ್ತು ಮಾತ್ರೆಗಳು ವ್ಯಾಧಿ ಸಾಧಿಸುವ ಮುನ್ನ ಯೋಗ ಮಾಡಿ ಇಡೀ ಬದುಕನ್ನು ಸ್ವಸ್ಥವಾಗಿಡಿ ಎಂದ ಅವರು, ಯಾರು ಸಾಮಾಜಿಕವಾಗಿ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೋ ಅವರೇ ನಿಜವಾದ ಭಕ್ತರು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿ ಮಾಡಿ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವಗಂಗಾ ಯೋಗ ಕೇಂದ್ರ ಸಂಸ್ಥಾಪಕ ಕಾರ್ಯಾಧ್ಯಕ್ಷ, ಯೋಗಾಚಾರ್ಯ ಸಿ.ವಿ. ರುದ್ರಾರಾಧ್ಯ ಮಾತನಾಡಿ, ಸುದ್ದಿಗಾಗಿ ಸೇವೆ ಮಾಡಬೇಡ. ಸೇವೆ ಮಾಡಿ ಸುದ್ದಿಯಾಗಬೇಡ. ಸದ್ದಿಲ್ಲದೇ ಸೇವೆ ಮಾಡು ಎಂದು ಶಿವಕುಮಾರಸ್ವಾಮಿಗಳು ಹೇಳಿದ್ದರು. ಯೋಗ ಎಂದರೆ ಅದೊಂದು ಸೇವೆ. ಅದೊಂದು ಆರೋಗ್ಯ ಎಂದರು.

ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಯೋಗ ಇಂದು ಇಡೀ ಜಗತ್ತನ್ನೇ ಒಂದು ಮಾಡಿದೆ. ಯೋಗಕ್ಕೆ ಯಾವುದೇ ಜಾತಿ, ಮತ, ಪಂಥವಿಲ್ಲದೇ ಸಮಸ್ತ ವಿಶ್ವ ಭಾರತವನ್ನು ಯೋಗದಿಂದಾಗಿ ಗಮನಿಸುವಂತಾಗಿದೆ ಎಂದರು.ಈ ಸಂದರ್ಭದಲ್ಲಿ ಯೋಗಾಚಾರ್ಯ ಸಿ.ವಿ. ರುದ್ರಾರಾಧ್ಯ ಮತ್ತು ವಚನಾನಂದ ಶ್ರೀಗಳಿಗೆ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಇ. ಕಾಂತೇಶ್, ಮೇಯರ್ ಸುನಿತಾ ಅಣ್ಣಪ್ಪ, ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ಇ. ವಿಶ್ವಾಸ್, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಯೋಗ ಶಿಕ್ಷಕ ಸುಧಾಕರ್, ವಿವಿಧ ಬಡಾವಣೆಯ ಯೋಗ ಶಿಕ್ಷಕರು ಉಪಸ್ಥಿತರಿದ್ದರು.