
ಶಿವಮೊಗ್ಗ: ದೆಹಲಿಯ ಎರಡು ದಿನದ ಪ್ರವಾಸ ಫಲ ತಂದಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿ ಸಮಿತಿ ಸಭೆಯಲ್ಲಿ ಕ್ಷೇತ್ರದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಸ್ತಾಪ ಮಾಡಿದ್ದು, ಗ್ರಾಮೀಣಾಭಿವೃದ್ಧಿ ಕೇಂದ್ರ ಸಚಿವರು ಇದಕ್ಕೆಲ್ಲಾ ಒಪ್ಪಿಗೆ ನೀಡಿದ್ದಾರೆ ಎಂದರು.

ಮಲೆನಾಡಿನಲ್ಲಿ ಕಾಲುಸಂಕ…
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ಸೇರಿದಂತೆ ಕಾಲುಸಂಕಗಳ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸುಮಾರು 634 ಕಾಲು ಸಂಕಗಳನ್ನು ನಿರ್ಮಾಣ ಮಾಡಲು 35 ಕೋಟಿ ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ. ಇದರಿಂದ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದ ರಸ್ತೆ ಹಾಗೂ ತೊರೆಗಳನ್ನು ದಾಟಲು ಅನುಕೂಲವಾಗುತ್ತದೆ. ಜನ ಮತ್ತು ಜಾನುವಾರುಗಳು ತಮ್ಮ ಪ್ರಾಣವನ್ನು ರಕ್ಷಣೆ ಮಾಡಲು ಇದು ಸಹಕಾರಿಯಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುಸಂಕವನ್ನು ನಿರ್ಮಾಣ ಮಾಡಲಾಗುವುದು ಎಂದರು.

ಜಾನುವಾರು ಅನುತ್ಪಾದಕತೆ ನೀಗಿಸಲು ಕ್ರಮ…
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷವಾಗಿ ತಾಂಡ್ಯಾ ಜನರ ಮತ್ತು ಪರಿಶಿಷ್ಟರ ಜಾನುವಾರುಗಳಲ್ಲಿ ಬಂಜೆತನ ಕಂಡುಬಂದಿದೆ. ಸರಿಯಾದ ಸಮಯಕ್ಕೆ ಗರ್ಭಧಾರಣೆಯಾಗದಿದ್ದರೆ ತುಂಬಾ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಆರ್ಥಿಕ ಸಮಸ್ಯೆ ಎದುರಾಗದಂತೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರೈತರಿಗೆ ಮಾಹಿತಿ ನೀಡುವುದಲ್ಲದೆ ಸೂಕ್ತ ಅನುದಾನ ನೀಡಲು ಸಚಿವರು ಒಪ್ಪಿಕೊಂಡಿದ್ದಾರೆ ಎಂದ ಅವರು, ಇದರಿಂದ ಹೈನುಗಾರಿಕೆ ಹೆಚ್ಚಳವಾಗುತ್ತದೆ ಎಂದರು.
ದೇವಸ್ಥಾನಗಳ ಅಭಿವೃದ್ಧಿ: ಪುರಾತತ್ವ ಇಲಾಖೆಯ ಸಹಯೋಗದಲ್ಲಿ ಬಿದನೂರಿನ ಕೋಟೆ ಅಭಿವೃದ್ಧಿಗೆ ಕೇಂದ್ರದ ನೆರವು ಕೇಳಲಾಗಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ಒಂದು ಕೋಟಿ ನೆರವು ಸಿಕ್ಕಿದ್ದು, ಕೇಂದ್ರದ ಅನುದಾನವೂ ಸೇರಿಕೊಂಡು ಬಿದನೂರು ಕೋಟೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಹಾಗೆಯೇ ಶಿಕಾರಿಪುರದ ಅಲ್ಲಮ ಪ್ರಭು ಕ್ಷೇತ್ರದ ಅಭಿವೃದ್ಧಿಗೆ ಮತ್ತು ಭದ್ರಾವತಿಯ ಲಕ್ಷ್ಮೀನರಸಿಂಹ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಮಿಕರ ಕಲ್ಯಾಣಕ್ಕಾಗಿ ಹೊಸ ಯೋಜನೆ…
ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಾರಿಗೆ ತರಲಾಗುವುದು. ಜೂನ್ 28ರಂದು ಕಾರ್ಮಿಕ ಸಚಿವರು ಶಿವಮೊಗ್ಗಕ್ಕೆ ಬರಲಿದ್ದು, ಸಿದ್ಲಿಪುರ ಗ್ರಾಮದಲ್ಲಿ ನಿರ್ಮಾಣ ಮಾಡಲು ಯೋಜಿಸಿರುವ ಕಾರ್ಮಿಕರ ವಸತಿ ಸಮುಚ್ಛಯಕ್ಕೆ ಚಾಲನೆ ನೀಡುವರು ಎಂದರು.
ಸಿದ್ಲಿಪುರ ಗ್ರಾಮದ ಹತ್ತು ಎಕರೆ ಜಾಗದಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ವಲಸೆ ಕಾರ್ಮಿಕರಿಗಾಗಿ ಶಾಶ್ವತವಾದ ಬೆಚ್ಚನೆಯ ಸೂರನ್ನು ನಿರ್ಮಿಸಲಾಗುವುದು. ಇದರಲ್ಲಿ ಸುಮಾರು 96 ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗುವುದು. ಸುಮಾರು 450 ಕಾರ್ಮಿಕರು ಅಲ್ಲಿ ವಾಸ ಮಾಡಬಹುದಾಗಿದೆ. ಹಾಗೆಯೇ ಭದ್ರಾವತಿಯ ಕಸಬಾ ಹೋಬಳಿ ಉಜ್ಜನೀಪುರದ ಎರಡು ಎಕರೆ ಜಾಗದಲ್ಲಿ ಎರಡು ಕೋಟಿ ವೆಚ್ಚದ ಕಾರ್ಮಿಕ ಭವನವನ್ನು ನಿರ್ಮಿಸಲಾಗುವುದು ಎಂದರು.

ಅದೇ ದಿನ ನಗರದ ಕುವೆಂಪು ರಂಗಮಂದಿರದಲ್ಲಿ ಹಾಗೂ ಭದ್ರಾವತಿಯಲ್ಲಿ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುವುದು. ಇದೊಂದು ವಿಶೇಷ ತಪಾಸಣಾ ಶಿಬಿರವಾಗಿದೆ. ಕಾರ್ಮಿಕರು ಇಲ್ಲಿ ತಪಾಸಣೆಯ ಜೊತೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾಗಬಹುದು. ಆ ಹಣವನ್ನು ಕೂಡ ವಾಪಾಸ್ ಮಾಡಲಾಗುವುದು. ಇದಕ್ಕಾಗಿ ಸುಮಾರು 10 ಕೋಟಿ ರೂ.ವೆಚ್ಚವಾಗಲಿದೆ. ಕಾರ್ಮಿಕ ಸಚಿವರು ಈ ಕಾರ್ಯಕ್ರಮಕ್ಕೆ ಆಗಮಿಸುವರು. ಜಿಲ್ಲೆಯ ಎಲ್ಲಾ ಶಾಸಕರು, ಜನಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ. ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾರ್ಮಿಕ ವಿಮಾ ಆಸ್ಪತ್ರೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲಿಯೇ ಇದರ ಉದ್ಘಾಟನೆಯಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ, ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಪ್ರಮುಖರಾದ ಎಂ.ಬಿ. ಭಾನುಪ್ರಕಾಶ್, ಟಿ.ಡಿ. ಮೇಘರಾಜ್, ಎಸ್. ದತ್ತಾತ್ರಿ, ಎಸ್.ಎಸ್. ಜ್ಯೋತಿ ಪ್ರಕಾಶ್, ಪೆರುಮಾಳ್, ಸುಂದರ್‍ಬಾಬು, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.