ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಹಾಗು ಉತ್ತರ ಕರ್ನಾಟಕ ಭಾಗದ ಬಹುಪಾಲು ಕುಟುಂಬಗಳು ಮಕ್ಕಳ ಸಮೇತ ಹೊಟ್ಟೆಪಾಡಿಗಾಗಿ ನೆರೆಯ ರಾಜ್ಯಗಳಾದ ಗೋವಾ,ಮಹಾರಾಷ್ಟ್ರ, ತಮಿಳುನಾಡು, ಕೇರಳ ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಕಾಫಿಸೀಮೆ ,ಶಿವಮೊಗ್ಗ, ಮಂಗಳೂರು, ಬೆಂಗಳೂರು ಭಾಗಗಳಿಗೆ ವಲಸೆ ಹೋಗುತ್ತಿದ್ದು,ಇದರಿಂದಾಗಿ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಇಂತಹವರಿಗಾಗಿ ರಾಜ್ಯ ಸರ್ಕಾರ ವಿಶೇಷ ವಸತಿ ಶಾಲೆ ಪ್ರಾರಂಭಿಸಬೇಕೆಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಾಕ್ಷರಾದ ಗಿರೀಶ್ ಡಿ.ಆರ್.ಅವರು ಇಂದು ಬೆಂಗಳೂರಿನಲ್ಲಿ ಮಾನ್ಯ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರಿಗೆ ಭೇಟಿಯಾಗಿ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಬಂಜಾರ ಸಮಾಜ ಅತೀವವಾಗಿ ಹಿಂದುಳಿದಿದೆ.
ವಲಸೆ ಹೋಗುವ ಕುಟುಂಬಗಳಿಗೆ ಸರಿಯಾದ ಭದ್ರತೆ ಇಲ್ಲ. ಬಂಜಾರ ಸಮಾಜದ ಅಪ್ರಾಪ್ತ ಬಾಲಕಿಯರ ಮೇಲೆ,ಮಹಿಳೆಯರ ಮೇಲೆ ಸಾಕಷ್ಟು ಅತ್ಯಾಚಾರ ಪ್ರಕರಣಗಳಾಗಿವೆ.
ವಲಸೆ ಹೋದ ಸಂದರ್ಭದಲ್ಲಿ ವಾಹನ ಅಪಘಾತವಾಗಿ ಬಹುಪಾಲು ಮಂದಿ ಮೃತರಾಗಿದ್ದರೂ ಸರ್ಕಾರದಿಂದ ಯಾವುದೇ ಪರಿಹಾರ ಹಾಗು ಕ್ರಮ ಕೈಗೊಂಡಿಲ್ಲ.
ವಲಸೆ ಕುಟುಂಬದವರ ಮೇಲೆ ದಬ್ಬಾಳಿಕೆ,ಹಲ್ಲೆಗಳು ನಡೆಯುತ್ತಿದ್ದರೂ ಸರ್ಕಾರ ಮೌನ ವಹಿಸಿರುವುದು ಖಂಡನೀಯ ಎಂದರು.

ವಲಸೆಯನ್ನು ತಡೆಗಟ್ಟಿ ಸ್ಥಳೀಯವಾಗಿ ಉದ್ಯೋಗ ಅವಕಾಶಗಳನ್ನು ನೀಡಲಾಗುವುದು ಎನ್ನುವ ಸರ್ಕಾರದ ಭರವಸೆ ಹುಸಿಯಾಗಿದೆ.
ಕೊನೆಪಕ್ಷ ವಲಸೆ ಹೋಗುವ ಕುಟುಂಬದವರ ಮಕ್ಕಳಿಗಾದರೂ ಮೊರಾರ್ಜಿ ವಸತಿ ಶಾಲೆಯ ರೀತಿಯಲ್ಲಿ ವಿಶೇಷ ವಸತಿ ಶಾಲೆಯನ್ನು ಪ್ರಾರಂಭಿಸಿ ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಯವರೆಗೆ ಉಚಿತ ಶಿಕ್ಷಣವನ್ನು ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಂಜಾರ ಗುರುಪೀಠ ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಸ್ವಾಮೀಜಿಗಳು,
ತಿಪಟೂರಿನ ರುದ್ರಮುನಿ ಸ್ವಾಮೀಜಿಗಳು,ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ್ ನಾಯ್ಕ್,ಪ್ರಮುಖರಾದ ಉಮೇಶ್, ಕೆ.ಎನ್.ಮಂಜುನಾಥ್, ಎಸ್.ಆರ್. ರಾಠೋಡ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…