ಶಿವಮೊಗ್ಗ: ಭೂಮಿ, ವಸತಿ, ವಿದ್ಯಾರ್ಥಿ ವೇತನ, ಹಾಸ್ಟೆಲ್‍ಗಳಿಗೆ ಮೂಲಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಟಿ.ಹೆಚ್. ಹಾಲೇಶಪ್ಪ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರಸಕ್ತ ರಾಜ್ಯ ಸರ್ಕಾರದ ದುರಾಡಳಿತದಲ್ಲಿ ದಲಿತರ, ಬಡವರ, ಮಹಿಳೆಯರ ಸಮಸ್ಯೆಗಳನ್ನು ಕಡೆಗಾಣಿಸಲಾಗಿದೆ. ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಗ್ರಹಿಸಿದರು.
ಶಿಕ್ಷಣ ತಜ್ಞರಲ್ಲದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕ ರದ್ದುಗೊಳಿಸಬೇಕು. ಹಳೇ ಪರಿಷ್ಕರಣ ಪಠ್ಯಪುಸ್ತಕವನ್ನೇ ಶಾಲೆಗಳಿಗೆ ಒದಗಿಸಬೇಕು. ಪರಿಶಿಷ್ಟ ಜಾತಿ, ವರ್ಗಗಳಿಗೆ ಕಾಯ್ದಿರಿಸಿರುವ ಹಣದ ದುರುಪಯೋಗ ತಡೆಗಟ್ಟಬೇಕು. ಮಲೆನಾಡು ಭಾಗದಲ್ಲಿ ಕಾಫಿ ಪ್ಲಾಂಟ್‍ಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಿ ಭೂ ಹೀನರಿಗೆ ಹಂಚಬೇಕು. ಪಿಟಿಸಿಎಲ್ ಕಾಯ್ದೆ ತಿದ್ದುಪಡಿಯಾಗಬೇಕೆಂದು ಆಗ್ರಹಿಸಿದರು.

ನಾಗರೀಕ ಹಕ್ಕು ಜಾರಿ ನಿದೇಶನಾಲಯಕ್ಕೆ ರಕ್ಷಣಾತ್ಮಕ ಅಧಿಕಾರ ನೀಡಬೇಕು. ದೌರ್ಜನ್ಯ ನಿಯಂತ್ರಣ ಕಾಯ್ದೆ ರಕ್ಷಣೆಯಲ್ಲಿರಬೇಕು. ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಬೇಕು. ಪರಿಶಿಷ್ಟರ ವಿದ್ಯಾರ್ಥಿ ವೇತನವನ್ನು ತಡೆಹಿಡಿಯಲಾಗಿದ್ದು, ಕೂಡಲೇ ಬಿಡುಗಡೆ ಮಾಡಬೇಕು. ಹಾಸ್ಟೆಲ್‍ಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿರುವ ವರದಿಯ ಅನ್ವಯ ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ, ವರ್ಗದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು. ರಾಜ್ಯದಾದ್ಯಂತ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು. ದಲಿತರಿಗೆ ಉಚಿತ ವಸತಿ ಸೌಕರ್ಯ ಕಲ್ಪಿಸಬೇಕು. ಮೂಲಭೂತ ಸೌಲಭ್ಯ ನೀಡಬೇಕು. ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಪ್ರಮುಖರಾದ ಶಿವಕುಮಾರ್, ಮಂಜುನಾಥ್, ಪಳಿನಿ, ಹರೀಶ್, ಶೇಷಪ್ಪ, ಗೋವಿಂದ್, ಪರಮೇಶ್, ಪುಟ್ಟರಾಜು, ಜಗ್ಗು, ಮೀನು ಸೇರಿದಂತೆ ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…