ಶಿವಮೊಗ್ಗ: ಪ್ರತಿಯೊಬ್ಬರು ಸಾಧನೆಯಿಂದ ತನ್ನನ್ನು ತಾನು ಗುರುತಿಸಿಕೊಳ್ಳಬಹುದು. ಅವರು ಮಾಡಿದ ಕರ್ಮಗಳಿಂದ ಆತನಿಗೆ ಶ್ರೇಷ್ಠತೆ ಲಭ್ಯವಾಗುತ್ತದೆ. ಕರ್ಮಗಳ ಮುಖಾಂತರ ಸಾಧನೆ ಮಾಡಿ ದೈವತ್ವವನ್ನು ಪಡೆಯಬಹುದು ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ವೇ. ಭೀಮೇಶ್ವರ ಜೋಶಿ ಅವರು ಹೇಳಿದ್ದಾರೆ.

ಇಂದು ಶ್ರೇಷ್ಟ ವಿ. ಕಾಂಚನ ವಿ. ಮೂರ್ತಿ ಅಭಿಮಾನಿ ಬಳಗದಿಂದ ನಗರದ ಮಾತಾ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಗಾರುಡಿ, ಲಯ ಚತುರ, ಕೀರ್ತಿಶೇಷ ವಿ. ಶ್ರೀ ಕಾಂಚನ ವಿ. ಮೂರ್ತಿ ಅವರ 80 ನೇ ವರ್ಷದ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಸಂಗೀತ ಎನ್ನುವುದು ದೈವತ್ವದ ಕಡೆಗೆ ಆಕರ್ಷಣೆ ಮಾಡುವಂತಹುದು. ಮನುಷ್ಯ ತಾನು ಮಾಡಿದ ಮತ್ತು ತಾನು ನಡೆದುಕೊಂಡ ರೀತಿಯಿಂದ ಜೀವನದಲ್ಲಿ ಶ್ರೇಷ್ಠತೆ ಪಡೆದುಕೊಳ್ಳುತ್ತಾನೆ. ಯಾವುದೇ ಕರ್ಮವಾಗಲಿ, ತಾನು ಮಾಡುವ ಕರ್ಮದಲ್ಲಿ ಶ್ರದ್ಧೆ, ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡಾಗ ಆತ ಆ ವೃತ್ತಿಯಲ್ಲಿ ಶ್ರೇಷ್ಠ ಸಾಧಕನೆನಸಿಕೊಳ್ಳುತ್ತಾನೆ‌ ಎಂದರು. ವೈದ್ಯರಾಗಿರಲಿ, ರಾಜಕಾರಣಿಯಾಗಿರಲಿ, ಕೈಗಾರಿಕೋದ್ಯಮಿಯಾಗಿರಲಿ, ಸಮಾಜಸೇವಕ ಯಾರೇ ಆಗಿರಲಿ ತಮ್ಮ ಕರ್ಮಗಳಲ್ಲಿ ಶ್ರೇಷ್ಠತೆಯನ್ನು ಕಾಣಬೇಕು.

ಅವರ ಸಾಧನೆ ಅವರನ್ನು ಗುರುತಿಸಬೇಕು. ಅಂತಹ ಶ್ರೇಷ್ಠ ಸಾಧಕರಲ್ಲಿ ವಿದ್ವಾನ್ ಶ್ರೀ ಕಾಂಚನ ವಿ. ಮೂರ್ತಿ ಅವರು ಒಬ್ಬರು. ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ವರ್ಣಿಸಲು ಅಸಾಧ್ಯ. ಅವರ ಸಾವಿರಾರು ಶಿಷ್ಯರು ಅವರ ಸಾಧನೆಯಿಂದ ಪ್ರೇರೇಪಿತರಾಗಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಹೊಸಹಳ್ಳಿ ವೆಂಕಟರಾಂ, ಮಂಜುಳಾಂಬ ಕಾಂಚನ ವಿ. ಮೂರ್ತಿ ಭಾಗವಹಿಸಿದ್ದರು. ಹಿರಿಯ ವಿದ್ವಾಂಸರಿಂದ ನಾದ ನಮನ, ನುಡಿ ನಮನ, ಲಯ ವಾದ್ಯ ನಮನ ಕಾರ್ಯಕ್ರಮ ನಡೆಯಿತು.

ವರದಿ ಮಂಜುನಾಥ್ ಶೆಟ್ಟಿ…