ಶಿವವೊಗ್ಗ: ಸಂಕುಚಿತ ಮನೋಭಾವ ಬಿಟ್ಟು ಪ್ರತಿಯೊಬ್ಬರೂ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡರೆ ರಾಜ್ಯದಲ್ಲಿಯೇ ಸದೃಢ ಸಮಾಜ ನಿರ್ಮಿಸಬಹುದಾಗಿದೆ ಎಂದು ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ರೇಣುಕಾ ಪೀಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನವು ಜಿಲ್ಲಾ ಆರ್ಯ ಈಡಿಗ ಸಂಘದ ಸಹಯೋಗದಲ್ಲಿ ಈಡಿಗರ ಸಮುದಾಯ ಭವನದಲ್ಲಿ ಇಂದು ಆಯೋಜಿಸಿದ್ದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಮಾಜ ಪ್ರಬಲವಾಗಿದೆ. ಆದರೆ ಸಾಧನೆ ಏನೂ ಇಲ್ಲ. ನಾನು ಒಳ್ಳೆಯದಾಗಬೇಕೆಂಬ ಸಂಕುಚಿತ ಮನೋಭಾವನೆಯಿಂದ ಸಮಾಜ ಹೆಚ್ಚು ಸಂಘಟಿತವಾಗಿಲ್ಲ ಎಂದರು. ಸಂಘಟನೆಗೆ ನಿರಂತರ ಶ್ರಮ, ಹೋರಾಟ ಅಗತ್ಯವಾಗಿದೆ. ಇದರ ಜತೆಗೆ ರಾಜಕೀಯ ಶಕ್ತಿಯೂ ಬೇಕಿದೆ. ಹಾಗೆಂದು ಯಾರ ಗುಲಾಮರೂ ಆಗದೆ ಸ್ವಸಾಮರ್ಥ್ಯದಿಂದ ಮೇಲೆ ಬರಬೇಕಿದೆ. ಇತ್ತೀಚಿನ ದಿನಗಳಲ್ಲಿ ಸಮಾಜ ಸಂಘಟಿತವಾಗುತ್ತಿದ್ದು, ಬೆಳಕಿಗೆ ಬರುತ್ತಿದೆ. ಸಂಘಟನೆಗೆ ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಮಾತ್ರ ಶಕ್ತಿ ಬರುತ್ತದೆ ಎಂದರು. 

ನೂರು ವರ್ಷಗಳ ಹಿಂದೆಯೇ ವಿದ್ಯಾರ್ಥಿ ವೇತನ ಹಾಗೂ ಬಿಇಯೂಟದ ಪರಿಕಲ್ಪನೆಯನ್ನು 1908 ರಲ್ಲೇ ತಂದವರು ನಾರಾಯಣ ಗುರುಗಳು. ಸಮಾಜದ ಏಳಿಗೆಯಲ್ಲಿ ಶಿಕ್ಷಣವೇ ಮುಖ್ಯ. ಸುಶಿಕ್ಷಿತರು, ಸಾಹಿತಿಗಳು, ಹೋರಾಟಗಾರರು, ಚಿಂತಕರು ಇದ್ದ ಸಮಾಜದ ಏಳಿಗೆಯಾಗುತ್ತದೆ ಎಂಬುದನ್ನು ಪ್ರತಿಪಾದಿಸಿದ್ದರು. ಹೀಗಾಗಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕಿದೆ ಎಂದರು.ಇಂದು ವಿದೇಶಕ್ಕೆ ಹೋಗುವ ಶಿಕ್ಷಣವನ್ನೇ ನೀಡಲಾಗುತ್ತಿದೆ. ಇಲ್ಲಿ ಕಲಿತು ವಿದೇಶಕ್ಕೆ ಹೋಗುವ ಮಕ್ಕಳಿಂದಾಗಿ ಇಲ್ಲಿರುವ ತಂದೆತಾಯಂದಿರು ಅನಾಥರಾಗುತ್ತಿದ್ದಾರೆ. ಇದರ ಬದಲಾಗಿ ಇಲ್ಲಿಯೇ ಇದ್ದು ಗುರುಹಿರಿಯರು, ತಂದೆತಾಯಂದಿರ ಸೇವೆ ಮಾಡುವಂತಹ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.ಸಮಾಜದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಡಿಐಜಿಎ ಎಂಬ ಅಕಾಡೆಮಿಯನ್ನು ಸ್ಥಾಪಿಸಲಾಗುತ್ತದೆ. ಇದರಲ್ಲಿ ಶಿಕ್ಷಣ, ಕೌಶಲ್ಯ, ಮಾಹಿತಿ, ತರಬೇತಿ, ಸ್ವಉದ್ಯೋಗ ಮೊದಲಾದವುಗಳ ಬಗ್ಗೆ ಮಕ್ಕಳಿಗೆ ನೀಡಲಾಗುತ್ತದೆ. ಸನ್ಯಾಸ ಸ್ವೀಕರಿಸುವ ಮಕ್ಕಳಿಗೆ ಸನ್ಯಾಸ ಕೋರ್ಸ್ ಕೂಡ ನಡೆಸಲಾಗುತ್ತದೆ. ಶಾಸ್ತ್ರೀಯ ಸನ್ಯಾಸಕ್ಕೆ ವೇದಪಾಠ ಶಾಲೆ ಆರಂಭಿಸಲಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಎಸ್‌ಸಿ ಮಾಜಿ ಸದಸ್ಯ ಹಾಗೂ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಲಕ್ಷ್ಮೀ ನರಸಯ್ಯ, ಪ್ರತಿಭಾವಂತ ಮಕ್ಕಳಿಗೆ ಓದಿನಲ್ಲಿ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದನ್ನು ಶೈಕ್ಷಣಿಕ ಪರಿಕರಗಳನ್ನು ಖರೀದಿಸಲು ಮಾತ್ರ ಬಳಸಬೇಕು. ದುರ್ಬಳಕೆ ಮಾಡಿಕೊಳ್ಳಬಾರದೆಂದು ಕಿವಿ ಮಾತು ಹೇಳಿದರು.  ಕೋವಿಡ್‌ನಿಂದಾಗಿ ಕಳೆದ 2 ವರ್ಷ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಮಾಡಲು ಆಗಿರಲಿಲ್ಲ. ಈ ವರ್ಷ ಮತ್ತೆ ಚಾಲನೆ ಮಾಡಲಾಗಿದೆ. ರಾಜ್ಯದಲ್ಲಿ ವಾರ್ಷಿಕ 2591 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2.27 ಕೋಟಿ ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿ ವೇತನ ಮಾತ್ರವಲ್ಲದೆ, ವೃದ್ಧಾಪ್ಯವೇತನ, ಪ್ರಾಕೃತಿಕ ವಿಕೋಪಗಳಲ್ಲಿ ನೊಂದವರಿಗೆ ನೆರವು ನೀಡಲಾಗುತ್ತಿದೆ ಎಂದರು.  ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಡಿಜಿಟಲ್ ಲೈಬ್ರರಿ ಆರಂಭಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ, ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಹೀಗಾಗಿ ಸಮಾಜದಿಂದ ನೆರವು ಪಡೆದ ವಿದ್ಯಾರ್ಥಿಗಳು ಋಣವನ್ನು ಸಮಾಜಕ್ಕೆ ಮರುಪಾವತಿಸುವ ಕೆಲಸ ಮಾಡಬೇಕೆಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಸಮಾಜ ಸೇವೆ ದೃಷ್ಟಿಯಲ್ಲಿಟ್ಟುಕೊಂಡು ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ ಆರಂಭಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿ ವೇತನ ನೀಡಿಕೆ ಸೇವೆಯ ಒಂದು ಭಾಗವಾಗಿದೆ. ಇಂತಹ ನೆರವು ಪಡೆದ ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ಸಮಾಜದ ಋಣ ತೀರಿಸುವ ಕೆಲಸ ಮಾಡುವಂತೆ ಹೇಳಿದರು.  ವೇದಿಕೆಯಲ್ಲಿ ಟ್ರಸ್ಟಿಗಳಾದಶಿವಾನಂದ ಎಚ್.ಎಲ್. ಪೂರ್ಣೇಶ್ ಎಂ.ಆರ್., ಕುಸುಮಾ ಅಜಯ್, ಮುಖಂಡರಾದ ಡಾ. ಜಿ.ಡಿ.ನಾರಾಯಣಪ್ಪ, ಕಲಗೋಡು ರತ್ನಾಕರ್, ಬಾಳೆಗುಂಡಿ ಸುರೇಶ್, ಬಂಡಿ ರಾಮಚಂದ್ರ, ಗೀತಾಂಜಲಿ ದತ್ತಾತ್ರೇಯ, ಅಜ್ಜಪ್ಪ, ಜಿ.ಡಿ.ಮಂಜುನಾಥ, ಎಸ್.ಸಿ. ರಾಮಚಂದ್ರ ಮೊದಲಾದವರು ಇದ್ದರು. ಇದೇ ಸಂದರ್ಭದಲ್ಲಿ ಬಾಳೆಗುಂಡಿ ದಂಪತಿಯಿಂದ ಶ್ರೀಗಳ ಪಾದ ಪೂಜೆ ನೆರವೇರಿಸಲಾಯಿತು. ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ 218 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ವರದಿ ಮಂಜುನಾಥ್ ಶೆಟ್ಟಿ…