ತೀರ್ಥಹಳ್ಳಿ ನ್ಯೂಸ್…
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ತರಾತುರಿಯ ನಿರ್ಧಾರವಾಗಿದ್ದು, ದೇಶದ ಬಡ ಯುವಕರ ಉದ್ಯೋಗದ ಹಾಗೂ ಭವಿಷ್ಯದ ಹಕ್ಕನ್ನು ಕಸಿಯುವ ಅಪಾಯಕಾರಿ ಯೋಜನೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ, ಸಹಕಾರ ವಿಭಾಗದ ರಾಜ್ಯ ಸಂಚಾಲಕ ಡಾ.ಆರ್.ಎಂ. ಮಂಜುನಾಥ್ ಗೌಡ ಹೇಳಿದರು.
ಅವರು ಇಂದು ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಅಗ್ನಿಪಥ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.ಈ ಯೋಜನೆ ಜಾರಿಯಾದರೆ ನೇಮಕಾತಿಗೆ ಒಳಪಟ್ಟ 4 ವರ್ಷದ ನಂತರ ಯುವಜನತೆ ಭವಿಷ್ಯದ ಪ್ರಶ್ನೆ ಏನು ಎಂಬುದು ಗೊತ್ತಿಲ್ಲ. ಸರ್ಕಾರಕ್ಕೂ ಈ ಬಗ್ಗೆ ಅರಿವಿಲ್ಲ. ದೇಶದ ಏಕತೆ ಸಮಗ್ರತೆಗೆ ಧಕ್ಕೆ ತರುವ ಆತಂಕವೂ ಇದೆ. ಇಂತಹ ಯೋಜನೆಯನ್ನು ಕೈಬಿಡಬೇಕು ಎಂದರು.ರಾಜ್ಯ ಬಿಜೆಪಿ ಸರ್ಕಾರ ಪಠ್ಯ ಪರಿಷ್ಕರಣೆ ನೆಪದಲ್ಲಿ ಮಹಾನ್ ಸಾಧಕರನ್ನು ಅವಮಾನಿಸಿದೆ. ಸರ್ಕಾರದ ಅಧಿಕೃತ ಆದೇಶವಿರದೇ ಪಠ್ಯ ಪರಿಷ್ಕರಣಾ ಸಮಿತಿಯ ಸಹ ಸದಸ್ಯರ ಅಭಿಪ್ರಾಯಕ್ಕೂ ಮನ್ನಣೆ ನೀಡದೇ ಪರಿಷ್ಕೃತ ಪಠ್ಯ ಪುಸ್ತಕ ರೂಪಿಸಿರುವುದು ಸರಿಯಲ್ಲ.
ಇದು ಖಂಡನೀಯ. ಮತ್ತು ಸಮುದಾಯಗಳ ನಡುವಿನ ಅಶಾಂತಿಗೂ ಕೂಡ ಕಾರಣವಾಗುತ್ತದೆ. ಈ ಕೂಡಲೇ ಇದನ್ನು ವಾಪಸ್ ತೆಗೆದುಕೊಳ್ಳಬೇಕು. ಪ್ರೊ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಇದ್ದ ಪಠ್ಯ ಪುಸ್ತಕಗಳನ್ನೇ ವಿದ್ಯಾರ್ಥಿಗಳಿಗೆ ವಿತರಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಒ. ಶಿವಕುಮಾರ್, ಮುಖಂಡರಾದ ರತ್ನಾಕರ್ ಶೆಟ್ಟಿ, ಹಾರೋಗೊಳಿಗೆ ಪದ್ಮನಾಭ್, ಶಬಾನಾ, ವಿಠ್ಠಲ್, ವೆಂಕಟೇಶ್, ಸುಂದರೇಶ್ ಮೊದಲಾದವರಿದ್ದರು.