ಶಿವಮೊಗ್ಗ: ಜಿಎಸ್ಟಿ ಪರಿಹಾರವನ್ನು ಇನ್ನು ಐದು ವರ್ಷ ಮುಂದುವರಿಸಿ ಅಗತ್ಯ ವಸ್ತುಗಳ  ಮೇಲೆ ಏರಿಕೆ ಮಾಡಿರುವ ತೆರಿಗೆಯನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ಕೊಡುವುದನ್ನು ಇನ್ನೂ 5 ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಮುಂದುವರಿಸಬೇಕು. ಇಲ್ಲವಾದಲ್ಲಿ ಕೇಂದ್ರ ಜಿಎಸ್ಟಿ ಪರಿಹಾರ ನಿಲ್ಲಿಸಿದರೆ ನಮ್ಮ ರಾಜ್ಯಕ್ಕೆ ವಾರ್ಷಿಕ 20 ಸಾವಿರ ಕೋಟಿ ರೂ. ನಷ್ಟವಾಗಲಿದೆ. ಜುಲೈ, 2017 ರಿಂದ ಜಾರಿಯಾಗಿದ್ದ ಜಿಎಸ್ಟಿ ಪರಿಹಾರ ವ್ಯವಸ್ಥೆ ಗುರುವಾರ ಕೊನೆಗೊಂಡಿದೆ. ಚಂಡಿಗಢದಲ್ಲಿ ಮೂರು ದಿನಗಳ ಹಿಂದೆ ನಡೆದ 47ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಬೇಡಿಕೆ ಬಗ್ಗೆ ರಾಜ್ಯದ ಸಿಎಂ ಬೊಮ್ಮಾಯಿ ಸೇರಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರಕಾರಗಳ ಪ್ರತಿನಿಧಿಗಳು ತುಟಿಬಿಚ್ಚಿಲ್ಲ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸಿಎಂ ಬೊಮ್ಮಾಯಿ ಅವರು ಜಿಎಸ್ಟಿ ಸಭೆಯಲ್ಲಿ ಪಾಲ್ಗೊಂಡರೂ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿಲ್ಲ ರಾಜ್ಯಗಳಿಂದ ಜಿಎಸ್ಟಿಯ ತೆರಿಗೆ ಹಣವನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ಬರಬೇಕಾದ ತೆರಿಗೆಯ ಪರಿಹಾರ ಧನವನ್ನು ಕೇಳಿದರೆ ರಾಜ್ಯ ಸರ್ಕಾರಗಳು ಜಿಎಸ್ಟಿ ಪರಿಹಾರವನ್ನು ನೆಚ್ಚಿಕೊಳ್ಳದೆ ಪರ್ಯಾಯ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ರವರು ರಾಜ್ಯ ಸರ್ಕಾರಗಳಿಗೆ ಸಂದೇಶ ರವಾನಿಸುತ್ತಿರುವುದನ್ನು ನೋಡಿದರೆ ಕೇಂದ್ರ ಸರ್ಕಾರದ ದಿವಾಳಿತನ ಎದ್ದು ಕಾಣುತ್ತಿದೆ ಎಂದು ದೂರಿದೆ.

ಜಿಎಸ್ಟಿ ಕೌನ್ಸಿಲ್ನಲ್ಲಿ ನಿರ್ಣಯಗಳು ಬಹುಮತದ ಮೇಲೆ ತೀರ್ಮಾನವಾಗಲಿದ್ದು, ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳು ಇರುವ ಕಾರಣ ಕೇಂದ್ರದ ಹಣಕಾಸು ಸಚಿವರು ತಮಗೆ ಬೇಕಾದಂತೆ ತೀರ್ಮಾನ ಮಾಡಿದ್ದಾರೆ. ಕೂಡಲೇ ಅಗತ್ಯ ವಸ್ತುಗಳ ಮೇಲೆ ಏರಿಕೆ ಮಾಡಿರುವ ತೆರಿಗೆಯನ್ನು ಇಳಿಸಿ , ರಾಜ್ಯಗಳಿಗೆ ನೀಡುವ ಜಿಎಸ್ಟಿ ಪರಿಹಾರವನ್ನು ಇನ್ನೂ ಐದು ವರ್ಷಗಳಿಗೆ ಮುಂದುವರಿಸಬೇಕೆAದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಗಿರೀಶ್, ಜಿಲ್ಲಾ ಕಾಂಗೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಮುಖಂಡರಾದ ಎಸ್.ಕಮರೇಶ್, ಇ.ಟಿ.ನಿತೀನ್, ಶಿಲ್ಪಾ ಈಶ್ವರ್, ಎಂ.ರಾಹುಲ್, ಪುಷ್ಪಕುಮಾರ್, ಕಲ್ಲೂರು ವೆಂಕಟೇಶ್, ಸಚ್ಚಿನ್, ಮೋಹನ್ ಸೋಮಿನಕೊಪ್ಪ ಹಾಜರಿದ್ದರು. 

ವರದಿ ಮಂಜುನಾಥ್ ಶೆಟ್ಟಿ…