ಶಿವಮೊಗ್ಗ: ಸಂಸ್ಕೃತ ಕಲಿಯಲು ವಯಸ್ಸಿನ ಅಂತರ ಬೇಡ, ಈಗ ಎಲ್ಲರಿಗೂ ಸಂಸ್ಕೃತ ಕಲಿಸುವ ವ್ಯವಸ್ಥೆ ಸಂಸ್ಕೃತ ಭಾರತೀ ಮಾಡಿದೆ ಎಂದು ಸಂಸ್ಕೃತ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಟಿ.ಎನ್.ಪ್ರಭಾಕರ್ ತಿಳಿಸಿದರು. ಅವರು ಸಂಸ್ಕೃತ ಭಾರತಿ, ಯೋಗ ಶಿಕ್ಷಣ ಸಮಿತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗಳ ವತಿಯಿಂದ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿದ್ಯಾಲಯದ ಅಷ್ಟಾದಶಿ ಯೋಜನೆಯಡಿಯಲ್ಲಿ ಸಂಸ್ಕೃತ ಮತ್ತು ಯೋಗ ಶಿಕ್ಷಣ ಪಡೆದು ಉತ್ತೀರ್ಣರಾದವರಿಗೆ ಭಾನುವಾರ ನಗರದ ಸಂಸ್ಕೃತ ಭವನದಲ್ಲಿ ಪ್ರಶಸ್ತಿ ಪ್ರಧಾನ ಮಾಡುತ್ತ ತಿಳಿಸಿದರು.

ತಮ್ಮ ಬಾಲ್ಯ ಜೇವನದಲ್ಲಿ ಕಾರಣಾಂತರಗಳಿಂದ ಸಂಸ್ಕೃತ ಕಲಿಯಲು ಅಗದಿದ್ದವರಿಗೆ ಈಗ ಸುಲಭವಾಗಿ ಸಂಸ್ಕೃತ ಕಲಿಸುವ ಯೋಜನೆ ಸಂಸ್ಕೃತ ಭಾರತಿ ರೂಪಿಸಿದ್ದು ಅಭಿನಂದನಾರ್ಹ ಎಂದು ತಿಳಿಸಿದರು. ಸಂಸ್ಕೃತ ಮತ್ತು ಯೋಗ ನಾಣ್ಯದ ಎರಡು ಮುಖಗಳಿದ್ದಂತೆ, ಯೋಗದ ಪ್ರಾಮುಖ್ಯತೆಯ ಮೂಲ ಸಂಸ್ಕೃತ ಭಾಷೆಯಲ್ಲಿದೆ, ಯೋಗ ಮಾಡುವುದರ ಜೊತೆ ಜೊತೆಗೆ ಸಂಸ್ಕೃತವನ್ನೂ ಕಲಿತರೆ ಮೂಲದಲ್ಲಿರುವ ವಿಷಯವನ್ನು ಆಳವಾಗಿ ತಿಳಿದುಕೊಂಡಂತಾಗುತ್ತದೆ. ಯೋಗ ಮತ್ತು ಸಂಸ್ಕೃತ ಭಾರತೀಯ ಪರಂಪರೆಯಿಂದ ಬಂದಿದ್ದು ಇವರೆಡೂ ನಮ್ಮ ದೇಶದ ಶ್ರೇಷ್ಠ ವಾಗಿದ್ದು ಈಗ ವಿಶ್ವವ್ಯಾಪಿ ಜನಪ್ರಿಯವಾಗುತ್ತಿದೆ ಎಂದು ಯೋಗ ಮತ್ತು ಸಂಸ್ಕೃತದ ಹಿರಿಮೆಯನ್ನು ತಿಳಿಸಿದರು.
ನಿತ್ಯ ಪ್ರಾತ: ಬೇಗ ಎದ್ದು ಯೋಗ ಮಾಡುವುದು ಹಾಗೂ ಮಂತ್ರಗಳ ಉಚ್ಚಾರಣೆ ಮಾಡುವುದರಿಂದ ನಮ್ಮ ದೇಹ ಇಡೀ ದಿನ ಲವಲವಿಕಯ ಚಟುವಟಿಕೆಯಿಂದ ಇರುತ್ತದೆ. ಇಂತಹ ಯೋಜನೆಯಲ್ಲಿ ಭಾಗವಹಿಸಿ ತೇರ್ಗಡೆಯಾದ ಎಲ್ಲಾ ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಅಧ್ಯಯನ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ, ಸಂಸ್ಕೃತ ಭಾರತಿ ನಗರ ಅಧ್ಯಕ್ಷ ಎನ್.ವಿ.ಶಂಕರನಾರಾಯಣ, ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಕೋಶಾಧಿಕಾರಿ ಮಧುಸೂಧನ ದೇಸಾಯಿ, ಪ್ರಾಂತ ಸಹ ಮಂತ್ರಿ ಭಾಗ್ಯಲಕ್ಷ್ಮೀ, ಯೋಗ ಶಿಕ್ಷಣ ಸಮಿತಿ ಸಂಯೋಜಕರಾದ ಡಾ.ಬಿ.ಎಸ್.ಅರವಿಂದ, ಶಿಕ್ಷಕರಾದ ಗುರುಮೂರ್ತಿ, ಅನಂತಕೃಷ್ಣ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…