ಶಿವಮೊಗ್ಗ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಅಗತ್ಯ ಕಲಿಕಾ ಸಾಮಾಗ್ರಿಗಳು ಅವಶ್ಯಕ ಎಂದು ರೋಟರಿ ಜಿಲ್ಲೆ ೩೧೮೨ರ ಜಿಲ್ಲಾ ಸಾಕ್ಷರತಾ ಸಮಿತಿಯ ವೈಸ್ ಚರ‍್ಮನ್ ಜಿ.ವಿಜಯ್‌ಕುಮಾರ್ ಹೇಳಿದರು.
ಬೀರನಕೆರೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಜೆಸಿಐ ಸಹ್ಯಾದ್ರಿ ಶಿವಮೊಗ್ಗ, ಎಸ್.ಎನ್.ಎಂಟರ್‌ಪ್ರೆöÊಸಸ್ ವತಿಯಿಂದ ಮೈಕ್‌ಸೆಟ್ , ವಾಟರ್ ಬಾಟಲ್ ಹಾಗೂ ಕಲಿಕಾ ಸಾಮಾಗ್ರಿಗಳನ್ನು ವಿತರಿಸುವ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭಾವಂತರಿದ್ದು, ಅವರಿಗೆ ಸೂಕ್ತ ವೇದಿಕೆ ಮತ್ತು ಅವಕಾಶಗಳ ಅಗತ್ಯ ಇರುತ್ತದೆ. ಕಲಿಕೆ ಮತ್ತಷ್ಟು ಉತ್ತಮವಾಗಲು ಸೂಕ್ತ ಮೂಲ ಸೌಕರ್ಯ ಹಾಗೂ ಕಲಿಕಾ ಸಾಮಾಗ್ರಿಗಳನ್ನು ಒದಗಿಸಬೇಕಾಗಿರುತ್ತದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ಅಭಿನಂದನೀಯ ಕಾರ್ಯ ಎಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿದ್ದ ವಿದ್ಯಾರ್ಥಿಗಳು ಈಗ ಒಟ್ಟುಗೂಡಿ ತಾವು ಓದಿದ ಶಾಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವುದು ಇತರರಿಗೂ ಪ್ರೇರಣೆಯ ಕೆಲಸ. ೩೦ ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ಶಾಲೆಯ ಆಧುನೀಕರಣ ಮಾಡಿ ಮಾದರಿ ಶಾಲೆ ನಿರ್ಮಾಣ ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದರು.

ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಓದಿದ ಶಾಲೆಯ ಋಣ ತೀರಿಸುವ ಉದ್ದೇಶದಿಂದ ಗೆಳೆಯರು ಎಲ್ಲರೂ ಸೇರಿ ಶಾಲೆಯ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ನಮ್ಮ ಗಳಿಕೆಯ ಸ್ವಲ್ಪ ಹಣವನ್ನು ಶಾಲೆಯ ಕೆಲಸಕ್ಕೆ ವಿನಿಯೋಗಿಸುತ್ತಿದ್ದೇವೆ ಎಂದು ಹೇಳಿದರು.
ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಸಂಸ್ಥೆ ವತಿಯಿಂದ ಜೆಸಿಐ ಸಪ್ತಾಹದ ಪ್ರಯುಕ್ತ ಒಂದು ವಾರಗಳ ಕಾಲ ವಿವಿಧ ಶಾಲೆ ಹಾಗೂ ಬಡಾವಣೆಗಳಲ್ಲಿ ಯೋಗ, ಪರಿಸರ ಜಾಗೃತಿ, ವ್ಯಕ್ತಿತ್ವ ವಿಕಸನ ತರಬೇತಿ, ಚಿತ್ರಕಲೆ ಸ್ಪರ್ಧೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೆಸಿಐ ಶುಭಂ ಹೊಟೇಲ್‌ನ ಮಾಲಿಕರಾದ ಚಂದ್ರಹಾಸ ಶೆಟ್ಟಿ ಮಾತನಾಡಿದರು. ಮುಖ್ಯಶಿಕ್ಷಕ ಬಸವರಾಜ್ ಹಿರೇಮಠ್, ಜೆಸಿಐ ಸಂಸ್ಥೆಯ ಸ್ವಪ್ನಾ ಬದರೀನಾಥ್, ಶಾಲಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಚಂದ್ರನಾಯ್ಕ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…