ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ರೋಟರಿ ಸಲ್ಲಿಸಿದ ಸೇವೆ ಅನುಪಮ ಕೋವಿಡ್ ಸಮಯದಲ್ಲಿ ರೋಟರಿ ಸಂಸ್ಥೆಗಳ ಸೇವೆ ಎಂದು ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವರಾದ ಶ್ರೀಯುತ ಕೆ.ಎಸ್. ಈಶ್ವರಪ್ಪ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಾ, ಪ್ರಪಂಚದ ಇನ್ನೂರಕ್ಕೂ ಹೆಚ್ಚು ದೇಶಗಳಲ್ಲಿ ರೋಟರಿ ಸಂಸ್ಥೆ ಸಮುದಾಯ ಸೇವೆಗಳಲ್ಲಿ ಮುಂಚೂಣಿಯಲ್ಲಿದೆ. ಹಿಂದೆ ರೋಟರಿ ಸಂಸ್ಥೆ ಎಂದರೆ ಅದು ಶ್ರೀಮಂತರ ಸಂಸ್ಥೆಯೆAದು ತಪ್ಪು ಅಭಿಪ್ರಾಯವಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲಾ ಗ್ರಾಮೀಣ ಪ್ರದೇಶದಲ್ಲಿ ರೋಟರಿ ಸಂಸ್ಥೆಯ ಕ್ಲಬ್‌ಗಳು ಸ್ಥಾಪನೆಯಾಗಿ ಸಮುದಾಯಕ್ಕೆ ಅನುಪಮ ಸೇವೆ ಸಲ್ಲಿಸುತ್ತಿವೆ. ಈ ವರ್ಷ ರೋಟರಿ ಪೂರ್ವದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಶ್ರೀಮತಿ ಸುಮತಿ ಜಿ. ಕುಮಾರಸ್ವಾಮಿಯವರು ಶಿಕ್ಷಣ, ಆರೋಗ್ಯ ಹಾಗೂ ಸಮುದಾಯದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಅವರು ರೋಟರಿಯಿಂದ ಹಣವನ್ನು ಕ್ರೋಢೀಕರಿಸಿ ಸಮುದಾಯಕ್ಕಾಗಿ ಉತ್ತಮ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಲ್ಲಿ ಆ ಯೋಜನೆಗಳಿಗೆ ಖರ್ಚು ಮಾಡುವ ಅರ್ಧ ಭಾಗದ ಹಣವನ್ನು ಸಮುದಾಯದಿಂದ ಕ್ರೋಢಿಕರಿಸಿ ಕೊಡುವುದಾಗಿ ಭರವಸೆ ನೀಡಿದರು.
ಮುಂದುವರೆದು ಮಾತನಾಡಿದ ಅವರು ಪಲ್ಸ್ ಪೋಲೀಯೋ ಖಾಯಿಲೆಯನ್ನು ನಮ್ಮ ದೇಶದಿಂದ ನಿರ್ಮೂಲನೆ ಮಾಡಲು ರೋಟರಿ ಮಾಡಿದ ಸಹಾಯ ಅಪಾರವಾದದ್ದು. ಜೊತೆಗೆ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕಂಪ್ಯೂಟರ್ ಹಾಗೂ ಟ್ಯಾಬ್‌ಗಳ ವಿತರಣೆ ಮಾಡುವಲ್ಲಿ ರೋಟರಿಯ ಪಾತ್ರ ಅನನ್ಯ ಎಂದರು. ಇದೇ ಸಂದರ್ಭದಲ್ಲಿ ೨೦೨೧-೨೨ನೇ ಸಾಲಿನ ಅಧ್ಯಕ್ಷರಾದ ಮಂಜುನಾಥ್ ರಾವ್ ಕದಂ ಇವರಿಂದ ೨೦೨೨-೨೩ನೇ ಸಾಲಿನ ನೂತನ ಅಧ್ಯಕ್ಷರಾದ ಸುಮತಿ ಜಿ. ಕುಮಾರಸ್ವಾಮಿಯವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಅಧಿಕಾರ ಹಸ್ತಾಂತರ ಕಾರ್ಯಕ್ರಮದ ಪ್ರತಿಷ್ಠಾಪನಾಧಿಕಾರಿ ಹಾಗೂ ೨೦೨೩-೨೪ರ ನಿಯೋಜಿತ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಇವರು ಮಾತನಾಡುತ್ತಾ, ರೋಟರಿ ಸಂಸ್ಥೆಗೆ ಹೆಚ್ಚು ಹೆಚ್ಚು ಹೊಸ ಸದಸ್ಯರು ಸೇರ್ಪಡೆ ಮಾಡಿಕೊಳ್ಳುವುದರ ಜೊತೆಗೆ ಇರುವ ಸದಸ್ಯರನ್ನು ಉಳಿಸಿಕೊಂಡಲ್ಲಿ, ರೋಟರಿ ಕ್ಲಬ್‌ಗಳು ಇನ್ನೂ ಬಲಿಷ್ಠವಾಗುವುದರ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಜೊತೆಗೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಶಿಕ್ಷಕರು ಮತ್ತು ಕಾರ್ಯಕರ್ತರುಗಳಿಗೆ ನಮ್ಮ ರೋಟರಿಯ ಸಹಾಯ ಹಸ್ತ ಸದಾ ಇರುತ್ತದೆ ಎಂದರು.
ಹೊಸದಾಗಿ ಅಧಿಕಾರ ವಹಿಸಿಕೊಂಡ ಸುಮತಿ ಜಿ. ಕುಮಾರಸ್ವಾಮಿ ಅವರ ರೋಟರಿ ವರ್ಷ ಅತ್ಯಂತ ಸಮಾಜಮುಖಿಯಾಗಿದ್ದು ಎಲ್ಲಾ ಸದಸ್ಯರ ಪ್ರೀತಿ ವಿಶ್ವಾಸ ಗಳಿಸುತ್ತಾ, ಉತ್ತಮ ರೋಟರಿ ನಾಯಕಿಯಾಗಿ ಹೊರ ಬರಲಿ ಎಂದು ಆಶಿಸಿದರು. ಮುಖ್ಯ ಅತಿಥಿಗಾಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀ ಸಿ.ಎಸ್. ಷಡಾಕ್ಷರಿ ಇವರು ಮಾತನಾಡುತ್ತಾ, ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡ ಸುಮತಿ ಜಿ. ಕುಮಾರಸ್ವಾಮಿ ಇವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಂಟಿ ಕಾರ್ಯದರ್ಶಿಯೂ ಆಗಿದ್ದು, ಅವರು ಅಂತರರಾಷ್ಟಿçÃಯ ಖ್ಯಾತಿಯನ್ನು ಹೊಂದಿದ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದು ತಮಗೆ ಅತೀವ ಆನಂದವನ್ನು ಉಂಟು ಮಾಡಿದ್ದು, ಅವರ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಿಗೆ ನಮ್ಮ ಸಂಘ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಿದರು. ಅತಿಥಿಗಳಾಗಿ ರೋಟರಿ ವಲಯ ೧೧ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ಜೋನಲ್ ಲೆಫ್ಟಿನೆಂಟ್ ಕೆ. ರವಿ, ಕ್ಲಬ್‌ನ ಮಾಜಿ ಕಾರ್ಯದರ್ಶಿ ಸತೀಶ್‌ಚಂದ್ರ, ನೂತನ ಕಾರ್ಯದರ್ಶಿ ಕುಮಾರಸ್ವಾಮಿ ಭಾಗವಹಿಸಿದ್ದರು.
ಈ ಸಮಾರಂಭದಲ್ಲಿ ಪಿ.ಡಿ.ಜಿ. ಗಳಾದ ಎ.ಎಸ್. ಚಂದ್ರಶೇಖರ್, ಹೆಚ್.ಎಲ್. ರವಿ, ಮಾಜಿ ಸಹಾಯಕ ಗವರ್ನರ್‌ಗಳಾದ ಎ.ಟಿ. ಸುಬ್ಬೇಗೌಡ, ಚಂದ್ರಹಾಸ್ ಪಿ. ರಾಯ್ಕರ್, ವಸಂತ್ ಹೋಬಳಿದ್ದಾರ್, ವಿಜಯ್‌ಕುಮಾರ್ ಜಿ., ರೋಟರಿ ಪೂರ್ವದ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು, ಹಾಗೂ ಶಿಕ್ಷಕ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.