ಶಿವಮೊಗ್ಗ: ಯಜ್ಞಕ್ಕೂ ಜೀವನಕ್ಕೂ ಸಾಮ್ಯವಿದೆ. ಜೀವನ ಎಂಬ ಯಜ್ಞದಲ್ಲಿ ರಾಗ, ದ್ವೇಷ, ಕೆಟ್ಟ ಸಂಸ್ಕಾರ, ಕೆಟ್ಟ ಚಿಂತನೆ ಮತ್ತು ಕೆಟ್ಟ ಹವ್ಯಾಸಗಳನ್ನು ಪೂರ್ಣಾಹುತಿ ನೀಡಿದಾಗ ಮಾತ್ರ ಜೀವನದಲ್ಲಿ ಧನ್ಯತೆ ಉಂಟಾಗುತ್ತದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಭೀಮೇಶ್ವರ ಜೋಶಿ ಹೇಳಿದ್ದಾರೆ.
ಅವರು ಇಂದು ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಶ್ರೀ ಶೈನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ವಿನೋಬನಗರ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ದೇವಾಲಯದ ಗರ್ಭಗುಡಿಗೆ ಕವಚ ಸಮರ್ಪಣೆ, ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಶ್ರೀ ಯಜುಸಂಹಿತಾ ಯಾಗ ಮತ್ತು ವೇದನಾರಾಯಣಾನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಲೋಕದ ಹಿತವನ್ನು ನಿರಂತರ ಬಯಸಿ ತಮ್ಮ ಜೀವನವನ್ನೇ ಅರ್ಪಣೆ ಮಾಡಿದ ಅ.ಪ. ರಾಮಭಟ್ಟರಿಗೆ ವೇದನಾರಾಯಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಒಂದು ಸುಯೋಗ ಎನ್ನಬಹುದು. ಇಡೀ ಅರ್ಚಕ ಸಮುದಾಯಕ್ಕೆ ಅ.ಪ. ರಾಮಮಭಟ್ಟರು ಆದರ್ಶಪ್ರಾಯರು ಮತ್ತು ಅನುಕರಣೀಯರು ಎಂದರು.
ಒಂದು ದೇವಾಲಯ ಯಾವ ರೀತಿಯ ಸತ್ಕಾರ್ಯಗಳನ್ನು ಮಾಡಬಹುದು ಎನ್ನುವುದಕ್ಕೆ ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ನಿರಂತರವಾಗಿ ಭಜನೆ, ಕೀರ್ತನೆ, ಯಕ್ಷಗಾನ, ವೇದ ಪಾಠ, ಸಂಸ್ಕೃತ ಕಾರ್ಯಕ್ರಮಗಳು, ಉಪನ್ಯಾಸಗಳು, ಸಂಸ್ಕಾರ ಬೆಳೆಯಲು ಮತ್ತು ಸಂಸ್ಕೃತಿ ಕಾಪಾಡಲು ಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಹಮ್ಮಿಕೊಂಡು ಕಲೆ ಮತ್ತು ಸಂಸ್ಕೃತಿಯ ಪೋಷಕರಾಗಿ ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.ನನ್ನದೇನೂ ಇಲ್ಲ, ನನ್ನದೇನೂ ಅಲ್ಲ, ಎಲ್ಲವೂ ಗಣಪತಿಯ ಕೃಪೆ ಎಂದು ಹೇಳುತ್ತಾ ಆಲದೆಲೆಯ ಮೇಲೆ ನೀರಿನ ಹನಿ ಇರುವ ಹಾಗೇ ಇದ್ದೂ ಇಲ್ಲದಂತೆ ಎಲ್ಲವನ್ನೂ ಭಗವಂತನಿಗೆ ಸಮರ್ಪಿಸಿ ಸನಾತನ ಧರ್ಮದ ರಕ್ಷಣೆಗಾಗಿ ನಿರಂತರ ಸತ್ಕಾರ್ಯಗಳನ್ನು ಮಾಡುತ್ತಿರುವ ಅ.ಪ. ರಾಮಭಟ್ಟರು ಎಲ್ಲರಿಗೆ ಆದರ್ಶಪ್ರಾಯರು. ಅವರು ನೂರು ಕಾಲ ಬಾಳಲಿ ಎಂದು ಹಾರೈಸಿದರು.
ಸಾನಿಧ್ಯ ವಹಿಸಿದ್ದ ಹರಿಹರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ, ನಮ್ಮೆಲ್ಲರ ಬದುಕು ಅತ್ಯಮೂಲ್ಯವೂ ಹೌದು. ರಹಸ್ಯಾತ್ಮಕವೂ ಹೌದು. ನಮ್ಮ ಬದುಕು ಹೇಗೆ ಹಂತಹಂತವಾಗಿ ಬೆಳಕನ್ನು ಕಂಡುಕೊಳ್ಳುವಂತೆ ಬದುಕಿದ್ದಾಗ ಕನಿಷ್ಠ ನಾಲ್ಕು ಜನರಿಗಾದರೂ ಬದುಕನ್ನು ಕೊಡುವಂತಿರಬೇಕು. ಒಳ್ಳೆಯ ಚಿಂತನೆ, ಒಳ್ಳೆಯ ಕೆಲಸ ಮಾಡುತ್ತಾ ನೂರು ವರ್ಷ ಬದುಕಿರಿ ಎಂಬುದು ಋಷಿ ಮುನಿಗಳು ಆಶೀರ್ವದಿಸುತ್ತಾರೆ. ಅದೇ ರೀತಿ ನಮ್ಮಲ್ಲಿರುವ ಆರು ಶತ್ರುಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ತೊರೆದು ಇಂದ್ರೀಯ ನಿಗ್ರಹಗಳ ಮೂಲಕ ಆ ಆರು ಶತ್ರುಗಳನ್ನು ಜಯಿಸಿದರೆ ಬದುಕು ಪರಿಪೂರ್ನತೆಗೊಳ್ಳುತ್ತದೆ ಎಂದರು.ಬದುಕಿನಲ್ಲಿ ಸ್ಥಾನ ಮಾನಗಳು, ಏರಿಳಿತಗಳು ಬರುತ್ತಿರುತ್ತವೆ. ಬದುಕಿನಲ್ಲಿ ಭರವಸೆ ಇಟ್ಟು ಎಲ್ಲವನ್ನು ಸಮಚಿತ್ತದಿಂದ ತೆಗೆದುಕೊಂಡು ಬದುಕಿನ ಭರವಸೆಯ ಸೌಧದಲ್ಲಿ ಅರಸನಂತೆ ಬಾಳಬೇಕು. ಇರುವಷ್ಟು ಕಾಲ ಸದ್ವಿಚಾರ, ಸತ್ ಚಿಂತನೆಗಳನ್ನು ಅಳವಡಿಸಿಕೊಂಡು ಸತ್ಕಾರ್ಯ ಮಾಡಿದಾಗ ಯಶಸ್ಸು ಸಿಗುತ್ತದೆ. ಅ.ಪ. ರಾಮಭಟ್ಟರು ತಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಂಡಿದ್ದಾರೆ. ಹಾಗಾಗಿ ಇಡೀ ಭಕ್ತ ಸಮೂಹ ಅವರ ಮೇಲೆ ಈ ಅಭಿಮಾನ ತೋರಿಸುತ್ತಿದೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಅರ್ಚಕ ವೃತ್ತಿಗೆ ರೋಲ್ ಮಾಡೆಲ್ ರಾಮಭಟ್ಟರು. ತಾನು ಗಳಿಸಿದ್ದನ್ನು ದೇವರಿಗೇ ಮತ್ತು ಭಕ್ತರಿಗೆ ಸಮರ್ಪಿಸಿದವರು. ಅದಕ್ಕಾಗಿ ಅವರು ಕೇವಲ ಅರ್ಚಕರಲ್ಲ ದೇವರು ಎಂದು ಅವರ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಅವರ ಬದುಕಿನುದ್ದಕ್ಕೂ ಯಾರ ಬಗ್ಗೆಯೂ ಕೆಟ್ಟ ಆಲೋಚನೆ ಮಾಡದೇ ಬದುಕಿದವರು ಎಂದರು.ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ನಮಗೆ ಸ್ಪೂರ್ತಿ ತುಂಬಿದವರು ಅ.ಪ. ರಾಮಭಟ್ಟರು. ಅವರನ್ನು ನಮ್ಮ ಜೀವನದಲ್ಲಿ ಎಂದೂ ಮರೆಯಲಾಗುವುದಿಲ್ಲ. ರಾಮಭಟ್ಟರ ಹುಟ್ಟಿದ ಊರು ಶರಾವತಿ ಉಗಮ ಸ್ಥಾನ ಅಂಬುತೀರ್ಥದ ಅಭಿವೃದ್ಧಿ ಬಗ್ಗೆ ಅವರು ಕನಸು ಕಂಡಿದ್ದರು. ಅದನ್ನು ಸಂಸದರ ಬಳಿ ಹೇಳಿದಾಗ ಈಗ ಸರ್ಕಾರದಿಂದ ಅದ್ಭುತವಾಗಿ ಅಭಿವೃದ್ಧಿಯಾಗಿದೆ. ಅದೇ ರೀತಿ ಅವರ ಇನ್ನೊಂದು ಕನಸು ರಾಗಿಗುಡ್ಡದಲ್ಲಿ ದೇವಸ್ಥಾನ ಸ್ಥಾಪಿಸಿ ಪ್ರವಾಸೋದ್ಯಮ ಕ್ಷೇತ್ರ ಮಾಡಬೇಕು ಎನ್ನುವುದಾಗಿದ್ದು, ಅದಕ್ಕೂ ಕೂಡ ಸರ್ಕಾರ 5 ಕೋಟಿ ರೂ. ಅನುದಾನ ನೀಡಿದೆ. ನಮ್ಮಂತಹ ಲಕ್ಷಾಂತರ ಜನರಿಗೆ ಅವರು ಮಾರ್ಗದರ್ಶಕರು ಎಂದು ಹೇಳಿದರು.ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಅ.ಪ. ರಾಮಭಟ್ಟರು ಪ್ರಶಸ್ತಿ ಮೀರಿ ಯೋಗ್ಯತೆಯುಳ್ಳವರು. ಋಷಿ ಪ್ರಜ್ಞೆಯ ಅರ್ಚಕರು. ರಾಷ್ಟ್ರೀಯ ವಾದವನ್ನು ಮೈಗೂಡಿಸಿಕೊಂಡವರು. ಸಮಾಜಕ್ಕಾಗಿ ಜೀವನ ಮಾಡಿದವರು ಎಂದರು.
ಜಿಲ್ಲಾ ಬ್ರಾಹ್ಮಣ ಮಹಾಸಾಭಾ ಅಧ್ಯಕ್ಷ ನಟರಾಜ್ ಭಾಗವತ್ ಮಾತನಾಡಿ, ಜಾತಿ, ಮತ ಬೇಧವಿಲ್ಲದೇ ಎಲ್ಲಾ ಹಿಂದೂ ಸಮಾಜದ ಬಾಂಧವರನ್ನು ಧರ್ಮಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದವರು. 32 ಬಾರಿ ಸಂಹಿತಾಯಾಗ ಮಾಡಿದ್ದು, ನವರಾತ್ರಿ ಸಂದರ್ಭದಲ್ಲಿ ಚಂಡಿಕಾಯಾಗ ಸಂಕಷ್ಟ ಚತುರ್ಥಿಯಂದು ವಿಶೇಷ ಪೂಜೆ ಏರ್ಪಡಿಸಿ ಇಡೀ ಅರ್ಚಕ ಸಮೂಹಕ್ಕೆ ಮಾದರಿಯಾಗಿದ್ದರು. ವೇದ ಶಿಬಿರ, ಮುಷ್ಠಿ ಅಕ್ಕಿ ಸಂಗ್ರಹ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವನ್ನಾಗಿಸಿದರು. ತಮಗೆ ಸ್ವಂತ ಮನೆ ಇಲ್ಲದಿದ್ದರೂ ತಮಗೆ ಅನಾರೋಗ್ಯವಾದಾಗ ಶಸ್ತ್ರಚಿಕಿತ್ಸೆಗೆ ಒಳಗಾದಾಗಲೂ ತನಗೆ ಬಂದ ಎರಡು ಲಕ್ಷ ರೂ.ಗಳನ್ನು ಸುರಭಿ ಗೋಶಾಲೆಗೆ ದಾನ ಮಾಡಿ ಔದಾರ್ಯ ಮೆರೆದವರು ಎಂದು ಹೇಳಿದರು.ಈ ಸಂದರ್ಭದಲ್ಲಿ ಅಖಿಲ ಭಾರತ ಕುಟುಂಬ ಪ್ರಭೋದನ್ ಪ್ರಮುಖ ಕಜಂಪಾಡಿ ಸುಬ್ರಹ್ಮಣ ಭಟ್ ಆಶಯ ನುಡಿಗಳನ್ನಾಡಿದರು.
ಅ.ಪ. ರಾಮಭಟ್ಟರಿಗೆ ವೇದನಾರಾಯಣಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ರಾಮಭಟ್ಟರು, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಕೆ.ಇ. ಕಾಂತೇಶ್, ವಿನಾಯಕ ಬಾಯರಿ, ಶಬರೀಶ್ ಕಣ್ಣನ್, ಶೈನೇಶ್ವರ ದೇವಾಲಯ ಸಮಿತಿಯ ಪ್ರಮುಖರು ಇದ್ದರು.