ಶಿವಮೊಗ್ಗ: ಹತ್ಯೆಗೊಳಗಾದ ಹರ್ಷನ ಸಹೋದರಿ ಅಶ್ವಿನಿ ನನ್ನ ಬಳಿ ಬಂದಿದ್ದರು. ಸಮಾಧಾನದಿಂದ ಮಾತನಾಡಲಿಲ್ಲ. ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲು ನನಗೆ ಇಷ್ಟವಿಲ್ಲ. ಅವರಿಗೆ ನಾನು ಮಾಹಿತಿ ಕೊಟ್ಟಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಹರ್ಷ ಕುಟುಂಬದ ಬಗ್ಗೆ ನನಗೆ ಗೌರವವಿದೆ. ನಾನು ಸಾಂತ್ವನ ಹೇಳಿ ಬಂದಿದ್ದೆ. ಎಲ್ಲಾ ರೀತಿಯ ಪರಿಹಾರವನ್ನು ಕೂಡ ನೀಡಿದ್ದೇವೆ. ಈಗ ಜೈಲಿನಲ್ಲಿ ಏನೋ ನಡೆದಿದೆ. ಮೊಬೈಲ್ ಸಿಕ್ಕಿದೆ ಎಂದು ಇಷ್ಟೆಲ್ಲಾ ಮಾತನಾಡುತ್ತಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಗೃಹ ಇಲಾಖೆ ಬದ್ಧವಾಗಿದೆ. ಆ ಬಗ್ಗೆ ಇರುವ ಮಾಹಿತಿಯನ್ನೂ ಕೂಡ ಹರ್ಷ ಸೋದರಿಗೆ ನೀಡಿದ್ದೇನೆ. ಆದರೆ, ಅವರಿಗೆ ಏಕೋ ಅಸಮಾಧಾನವಿದೆ ಎಂದು ಕಾಣುತ್ತದೆ. ನನ್ನ ಬಳಿ ಸಮಾಧಾನದಿಂದ ಮಾತನಾಡಲಿಲ್ಲ. ಅವರ ಜೊತೆಗೆ ಶ್ರೀರಾಮಸೇನೆಯ ಸುಮಾರು 20 ಜನ ಕೂಡ ಬಂದಿದ್ದರು ಎಂದರು.ಹರ್ಷ ಸೋದರಿಯ ಈ ರೀತಿಯ ವರ್ತನೆಯಿಂದ ಅವರ ಜೊತೆಗೆ ಬಂದಿದ್ದ ಶ್ರೀರಾಮ ಸೇನೆಯವರಿಗೂ ಬೇಸರವಾಗಿದೆ ಎಂದರು.ನೀವು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆಯಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ಗೃಹಸಚಿವರ ರಾಜೀನಾಮೆ ಕೇಳದೇ ಇನ್ಯಾರನ್ನು ಕೇಳುತ್ತಾರೆ.ಒಬ್ಬೊಬ್ಬರ ಮನಸು ಒಂದೊಂದು ರೀತಿ ಇರುತ್ತದೆ. ಏನು ಮಾಡಲಾಗುತ್ತದೆ ಎಂದರು.
ರಾಜ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೆ ಮಾತನಾಡುತ್ತೇವೆ. ಆತಂಕಪಡುವ ಅಗತ್ಯವಿಲ್ಲ ಎಂದರು.ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಈಗಾಗಲೇ ಮಳೆ ಹಿನ್ನಲೆಯಲ್ಲಿ ಉನ್ನತಮಟ್ಟದ ಸಭೆ ನಡೆಸಿದ್ದಾರೆ. ಎಲ್ಲಾ ಅಧಿಕಾರಿಗಳು ಎಚ್ಚೆರಿಕೆಯಿಂದ ಇರಬೇಕೆಂದು ಸೂಚನೆ ನೀಡಿದ್ದಾರೆ. ತೀವ್ರ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ತುರ್ತು ಪರಿಹಾರಕ್ಕೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮತ್ತು ತಹಶೀಲ್ದಾರ್ ಗಳಿಗೆ ಸೂಚಿಸಲಾಗಿದೆ ಎಂದರು.