ಸಾಗರ ನ್ಯೂಸ್…

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸತತ ಮೂರು ದಿನದಿಂದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗುತ್ತಿದ್ದರೂ, ತಾಲೂಕಿನ ಉಳ್ಳೂರಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೂ ಬಲವಂತದ ರಜೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಉಳ್ಳೂರಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ದೊಡ್ಡ ಪ್ರಮಾಣದಲ್ಲಿ ಸೋರುತ್ತಿದ್ದು, ಇದರೊಳಗೆ ಮಕ್ಕಳು ಉಳಿಯಲಾಗದ ಸ್ಥಿತಿ ನಿರ್ಮಾಣವಾಗಿದೆ. ನೀರು ಸೋರುವುದನ್ನು ಹಿಡಿಯಲು ಸ್ಟೀಲ್ ಪಾತ್ರೆ, ಪ್ಲಾಸ್ಟಿಕ್ ಟಬ್‌ಗಳನ್ನು ಇಡಲಾಗಿದೆ.
ಈ ಮಾಹಿತಿಯನ್ನು ಪಡೆದು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಇತ್ತೀಚೆಗೆ ನಿರ್ಮಾಣವಾದ ಈ ಹಾಸ್ಟೆಲ್‌ನ ಕಳಪೆ ಕಾಮಗಾರಿಯ ಕಾರಣದಿಂದ ಎಲ್ಲೆಡೆ ನೀರು ಸೋರುತ್ತಿದೆ. ವಿದ್ಯಾರ್ಥಿನಿಯರು ಮಲಗುವ ಸ್ಥಳ, ಅಡುಗೆ ಮನೆಯಲ್ಲಿಯೂ ದೊಡ್ಡ ಪ್ರಮಾಣದ ಸೋರಿಕೆ ಇದೆ. ಇಂತಹ ಸಂದರ್ಭದಲ್ಲಿ ಸೋರಿಕೆಯನ್ನು ತಡೆಯಲು ತಕ್ಷಣದ ಕ್ರಮಕ್ಕೆ ಆಡಳಿತ, ಶಾಸಕರು ಮುಂದಾಗಬೇಕಿತ್ತು.ಅದರ ಬದಲು ಮಕ್ಕಳನ್ನೇ ಮನೆಗೆ ಕಳುಹಿಸಲಾಗಿದೆ ಎಂದು ಆರೋಪಿಸಿದರು.

ಮಕ್ಕಳ ಹಾಸಿಗೆಗಳೆಲ್ಲ ನೀರಿನಿಂದ ಥಂಡಿಯಾಗಿವೆ. ಇಲ್ಲಿನ ಮಂಚಗಳನ್ನು ಕಬ್ಬಿಣದಿಂದ ನಿರ್ಮಿಸಲಾಗಿದ್ದು, ಕಟ್ಟಡದಲ್ಲಿನ ಆರ್ದತೆಯಿಂದ ವಿದ್ಯುತ್ ಶಾಕ್ ಸಂಭವಿಸುವ ಎಲ್ಲ ಸಾಧ್ಯತೆಗಳಿವೆ. ಈಗಾಗಲೇ ಹಲವು ಶಾಲೆಗಳು ಬೀಳುವ ಪರಿಸ್ಥಿತಿ ಇದೆ. ಇವುಗಳನ್ನು ಗಮನಿಸದಿರುವ ಸರ್ಕಾರ ಸತ್ತಿದೆಯೇ ಎಂಬ ಅನುಮಾನ ಕಾಡುತ್ತದೆ ಎಂದು ಗೋಪಾಲಕೃಷ್ಣ ತಿಳಿಸಿದರು.

ವರದಿ ಮಂಜುನಾಥ್ ಶೆಟ್ಟಿ…