ಶಿವಮೊಗ್ಗ: ಸ್ವಾತಂತ್ರ್ಯದ 75 ವರ್ಷದ ಅಮೃತ ಮಹೋತ್ಸವದ ಸವಿ ನೆನಪಲ್ಲಿ, ಎಐಸಿಸಿ ಮತ್ತು ಕೆಪಿಸಿಸಿ ಸೂಚನೆಯಂತೆ ಪ್ರತಿ ಜಿಲ್ಲೆಯಲ್ಲೂ 75 ಕಿ.ಮೀ. ಪಾದಯಾತ್ರೆಯನ್ನು ಕಾಂಗ್ರೆಸ್ ಸಹಕಾರಿ ವಿಭಾಗದಿಂದ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಸಹಕಾರಿ ವಿಭಾಗದ ರಾಜ್ಯ ಸಂಚಾಲಕ ಹಾಗೂ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥಗೌಡ ಹೇಳಿದರು.

ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ದುಡಿದ ಕಾಂಗ್ರೆಸ್ ಅನ್ನು ನೆನಪಿಸಿಕೊಳ್ಳುವುದು ಅಗತ್ಯವಾಗಿದೆ. ಈ ಅಮೃತೋತ್ಸವದ ನೆನಪಿನ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆ.10 ರೊಳಗೆ ಪಾದಯಾತ್ರೆಯನ್ನು ಆಯೋಜಿಸಲಾಗಿದೆ ಎಂದರು.ಜು. 28 ರಂದು ತೀರ್ಥಹಳ್ಳಿ ತಾಲೂಕಿನಿಂದ ಪಾದಯಾತ್ರೆ ಆರಂಭವಾಗಲಿದೆ. ಅಂದು ಬೆಳಗ್ಗೆ 8 ಗಂಟೆಗೆ ಮಾಜಿ ಮುಖ್ಯಮಂತ್ರಿ ದಿ. ಕಡಿದಾಳ್ ಮಂಜಪ್ಪನವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುವುದು. ಸುಮಾರು 14 ಕಿ.ಮೀ. ದೂರವಿರುವ ತೀರ್ಥಹಳ್ಳಿಗೆ ಪಾದಯಾತ್ರೆ ಮೂಲಕ ಬಂದು ತಾಲೂಕು ಕಚೇರಿ ಎದುರು ಸಭೆ ನಡೆಸಲಾಗುವುದು ಎಂದರು.

ಇತಿಹಾಸದ ನೆನಪು ಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಗಾಂಧೀಜಿ, ನೆಹರು ಸೇರಿದಂತೆ ಎಲ್ಲಾ ನಾಯಕರ ಬಗ್ಗೆ ಅವರ ಸ್ವಾತಂತ್ರ್ಯದ ಹೋರಾಟಗಳ ಬಗ್ಗೆ ಮತ್ತೊಮ್ಮೆ ತಿಳಿದುಕೊಳ್ಳಬೇಕಾಗಿದೆ. ಅವರ ಕೊಡುಗೆ, ಬಲಿದಾನಗಳ ಬಗ್ಗೆ ಇಂದಿನ ಯುವಕರಿಗೆ ಹೆಚ್ಚು ಮಾರ್ಗದರ್ಶನದ ಅಗತ್ಯವಿದೆ. ಇದೊಂದು ಹೋರಾಟವಲ್ಲ, ಚಳವಳಿಯೂ ಅಲ್ಲ, ಸಮಾನ ಆಸಕ್ತರೆಲ್ಲರೂ ಈ ಕಾರ್ಯಕ್ರಮಕ್ಕೆ ಬರಬಹುದು. ಸ್ವಾತಂತ್ರ್ಯದ ಹೆಜ್ಜೆಗಳನ್ನು ತಿಳಿದುಕೊಳ್ಳಬೇಕು. ಹಲವು ಸಂಪನ್ಮೂಲ ವ್ಯಕ್ತಿಗಳು ಈ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ನ ಸ್ವಾತಂತ್ರ್ಯ ಹೋರಾಟವನ್ನು ನೆನಪು ಮಾಡಿಕೊಡುವರು ಎಂದರು.

ರಾಜ್ಯಾದ್ಯಂತ ಸ್ವಾತಂತ್ರ್ಯೋತ್ಸವದ ನೆನಪಿನ ಪಾದಯಾತ್ರೆ ಕಾರ್ಯಕ್ರಮವನ್ನು ಆಯಾ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಸಹಕಾರಿ ವಿಭಾಗದ ನೇತೃತ್ವದಲ್ಲಿ ನಡೆಸಲಾಗುವುದು.ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಈ ಪಾದಯಾತ್ರೆಯನ್ನು ಕೈಗೊಳ್ಳಲಾಗುತ್ತದೆ. ಇದು ಯಾವುದೇ ಪಕ್ಷದ ವಿರುದ್ಧದ ಪ್ರತಿಭಟನೆಯಲ್ಲ ಎಂದು ಸ್ಪಷ್ಟಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಿ.ಒ. ಶಿವಕುಮಾರ್, ಷಡಾಕ್ಷರಿ, ಪದ್ಮನಾಭ್, ಎಸ್.ಕೆ. ಮರಿಯಪ್ಪ, ಶಂಕರಘಟ್ಟ ರಮೇಶ್, ಎಸ್.ಪಿ. ಶೇಷಾದ್ರಿ, ಜಗದೀಶ್, ಹಾರೋಗೊಳಿಗೆ ಪದ್ಮನಾಭ್, ಉಮೇಶ್ ಹಾಲಗದ್ದೆ, ಆಸಾದಿ, ಮಧುಕರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…