ಮಳೆಯೆಂದರೆ
ಏನೋ ಸಂಭ್ರಮ
ಮಿತಿಯಲ್ಲಿದ್ದರೆ ಪುಳಕ
ಅತಿಯಾದರೆ ಪ್ರವಾಹ
ಕಣ್ಣ ನೀರು ಕಾಣದಂತೆ…
ಸುರಿದುಬಿಡುತ್ತದೆ ಧೋ ಎಂದು
ಈ ಕಾಲಗಳೇ ಹೀಗೆ
ಮನುಷ್ಯನನ್ನು ಆತ್ಮವಿಮರ್ಶೆಯ
ಕಾಲ ಘಟ್ಟಕ್ಕೆ
ತಂದು ನಿಲ್ಲಿಸಿಬಿಡುತ್ತದೆ
ವಕಾಲತ್ತು ತಾನೇ ಮಾಡಿಕೊಳ್ಳಬೇಕು
ತೀರ್ಪು ಮಾತ್ರ ಪ್ರಕೃತಿಯದ್ದು…
ಸಹಜತೆಯನ್ನು ಆಕ್ರಮಿಸಿದರೆ
ಪ್ರತಿಫಲ ವನ್ನು ನೀಡಿಬಿಡುತ್ತದೆ
ಯಾರ ಮೂಲಾಜಿಗೂ ನಿಲುಕದೆ
ಇರುವುದೇ ಪ್ರಕೃತಿ…
ಅದನ್ನಾಕ್ರಮಿಸಿದರೆ…
ಅದು ತನ್ನ ಸ್ವಾಯತ್ತತೆಯನ್ನು
ಬಿಡಲೊಲ್ಲದು..
ಮರಳಿ ಪಡೆದೆ ತೀರುವುದು
ಅದು ಪ್ರತೀಕಾರವಾಗಿಯಾದರೂ
ಸರಿಯೇ….
ಈ ಪ್ರಕೃತಿಯ ವಿರಾಟ ನರ್ತನದಲ್ಲಿ
ಕೆಲವೊಮ್ಮೆ ಅಮಾಯಕರು
ಬಲಿಯಾಗುವುದುಂಟು..
ಹೇ….ವರುಣ ದೇವನೇ
ನಿನ್ನಾರ್ಭಟದಲ್ಲಿ ಅಮಾಯಕರು
ಸಿಲುಕಿಹರು…ಒಂದೊಮ್ಮೆ
ಕಣ್ಣರಳಿಸಿ ನೋಡು
ಕೆಲವೊಮ್ಮೆ… ಅಪರಾಧಿಗಳಿಗಿಂತ
ನಿರಾಪರಾಧಿಗಳೇ ಶಿಕ್ಷೆಗೆ
ಗುರಿಯಾಗುವುದು ಹೆಚ್ಚು.